ಬೀಜಿಂಗ್: ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾದಿಂದ ತೈಲ ಆಮದು ನಿಷೇಧ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಣೆ ಹಾಗೂ ಚೀನಾದಲ್ಲಿ ಹಣದುಬ್ಬರ ಹೆಚ್ಚಳ ಹಿನ್ನೆಲೆಯಲ್ಲಿ ಯುಎಸ್ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು, ನಷ್ಟದಲ್ಲಿ ವಹಿವಾಟು ಮುಗಿಸಿದೆ. ಆದರೆ ಏಷ್ಯಾದ ಷೇರು ಪೇಟೆಗಳು ಚೇತರಿಕೆಯತ್ತ ಸಾಗಿವೆ.
ಬೈಡನ್ ಸರ್ಕಾರದ ತೈಲ ನಿಷೇಧ ಘೋಷಣೆಯ ನಂತರ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ ಶೇ.2ರಷ್ಟು ಏರಿಕೆಯಾಗಿದೆ. ಟೋಕಿಯೋ ಮತ್ತು ಸಿಡ್ನಿ ಮಾರುಕಟ್ಟೆಗಳು ಲಾಭದಲ್ಲಿ ಸಾಗಿದರೆ ಶಾಂಘೈ, ಹಾಂಗ್‌ಕಾಂಗ್ ನಷ್ಟದಲ್ಲಿ ಸಾಗಿದೆ. ಅಧ್ಯಕ್ಷೀಯ ಚುನಾವಣೆಯಿಂದಾಗಿ ದಕ್ಷಿಣ ಕೊರಿಯಾ ಮಾರುಕಟ್ಟೆ ಬಂದ್ ಆಗಿತ್ತು.
ವಾಲ್‌ಸ್ಟ್ರೀಟ್‌ನ ಬೆಂಚ್‌ಮಾರ್ಕ್ ಎಸ್ ಅಂಡ್ ಪಿ 500 ಸೂಚ್ಯಂಕವು ಕುಸಿತ ಕಂಡಿದೆ. ಶಾಂಘೈ ಕಾಂಪೋಸಿಟ್ ಶೇ.0.5 ರಷ್ಟು ಸೂಚ್ಯಂಕ ಕಳೆದುಕೊಂಡು 3,278.54ಕ್ಕೆ ತಲುಪಿತು. ಚೀನಾದಲ್ಲಿ ಹಣದುಬ್ಬರವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಆರ್ಥಿಕ ತಜ್ಞ ಜೂಲಿಯನ್ ಇವಾನ್ಸ್-ಪ್ರಿಚರ್ಡ್ ವರದಿಯಲ್ಲಿ ತಿಳಿಸಿದ್ದಾರೆ. ಉಕ್ರೇನ್ ಯುದ್ಧದ ಕಾರಣದಿಂದಾಗಿ ಮಾರ್ಚ್‌ನಲ್ಲಿ ಜಾಗತಿಕ ಸರಕುಗಳ ಬೆಲೆಗಳ ಉಲ್ಬಣವು ಹೆಚ್ಚು ಸ್ಪಷ್ಟವಾದ ಪರಿಣಾಮವನ್ನು ಬೀರುತ್ತದೆ ಎಂದಿದ್ದಾರೆ.
ಹಾಂಗ್‌ಕಾಂಗ್ ಷೇರುಪೇಟೆಯಲ್ಲಿ ಸೆಂಗ್ ಶೇ.1.6 ರಷ್ಟು ಕುಸಿದು 20,428.39 ಕ್ಕೆ ತಲುಪಿದೆ. ಟೋಕಿಯೋದಲ್ಲಿ ನಿಕ್ಕಿ 225 ಶೇಕಡಾ 0.7 ರಷ್ಟು ಏರಿಕೆಯಾಗಿ 24,973.73 ಕ್ಕೆ ತಲುಪಿದೆ. ಸಿಡ್ನಿಯ ಎಸ್ ಅಂಡ್ ಪಿ-ಎಎಸ್‌ಎಕ್ಸ್ ಶೇ.1.1 ರಷ್ಟು ಏರಿಕೆಯಾಗಿ 7,054.60ಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಯುಎಸ್ ಪೇಟೆ ಇನ್ನಷ್ಟು ನಷ್ಟದಲ್ಲಿ ಸಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮುಂಬೈ ಷೇರುಪೇಟೆಯಲ್ಲಿ ದಿನದ ಆರಂಭದಲ್ಲೇ ಸೆನ್ಸೆಕ್ಸ್ 444 ಅಂಕಗಳ ಜಿಗಿತ