ನವದೆಹಲಿ: ಕಳೆದ ಡಿಸೆಂಬರ್ನಲ್ಲಿ ಶೇಕಡಾ 1.22ರಷ್ಟಿದ್ದ ಸಗಟು ಬೆಲೆ ಆಧಾರಿತ ಹಣದುಬ್ಬರವು (ಡಬ್ಲ್ಯುಪಿಐ) 2021ರ ಜನವರಿಯಲ್ಲಿ ಶೇ 2.03ಕ್ಕೆ ಏರಿಕೆಯಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಆಹಾರ ಪದಾರ್ಥಗಳ ಹಣದುಬ್ಬರ ಸ್ವಲ್ಪ ಕಡಿಮೆಯಾಗಿದ್ದು, ತಯಾರಿಕಾ ವಸ್ತುಗಳ ಹಣದುಬ್ಬರ ಹೆಚ್ಚಳವಾಗಿದೆ. ಡಿಸೆಂಬರ್ನಲ್ಲಿ ಶೇ -1.11 ರಷ್ಟಿದ್ದ ಆಹಾರ ಹಣದುಬ್ಬರವು ಜನವರಿಯಲ್ಲಿ ಶೇ -2.8ಕ್ಕೆ ಇಳಿಕೆಯಾಗಿದೆ.
ಇಂಧನ ಮತ್ತು ವಿದ್ಯುತ್ ಹಣದುಬ್ಬರ ಶೇ 4.78ರಷ್ಟಿದ್ದು, ಕಳೆದೊಂದು ವಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿದೆ. ಇನ್ನು ತರಕಾರಿಗಳ ಹಣದುಬ್ಬರ ಶೇ -20.82 ಹಾಗೂ ಆಹಾರೇತರ ಹಣದುಬ್ಬರ ಶೇ 4.16ರಷ್ಟಿದೆ.
ಇದನ್ನೂ ಓದಿ: ಸತತ 7 ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ: 2021 ರಲ್ಲಿ ಬರೋಬ್ಬರಿ 19 ಬಾರಿ ಇಂಧನ ಏರಿಕೆ!
ಫೆಬ್ರವರಿ 5 ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಾಲ್ಕನೇ ಬಾರಿ ಬಡ್ಡಿದರಗಳ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯನ್ನು ಕಾಯ್ದುಕೊಂಡು, ಅಗತ್ಯವಿರುವವರೆಗೂ ವಿತ್ತೀಯ ನೀತಿಯ ಈ ನಿಲುವನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿತ್ತು.