ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆಯೂ ದೇಶಿ ವಾಹನ ಉದ್ಯಮವನ್ನು ಬೆಂಬಲಿಸಲು ಬಹಳ ವಿಳಂಬವಾಗುತ್ತಿರುವ ವಾಹನ ಗುಜರಿ (ಸ್ಕ್ರ್ಯಾಪಿಂಗ್) ನೀತಿ ಅನುಷ್ಠಾನಕ್ಕೆ ಸಚಿವಾಲಯ ಮುಂದಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾನು ಕಳೆದ ಎರಡು ವರ್ಷಗಳಿಂದ ಸ್ಕ್ರ್ಯಾಪಿಂಗ್ ನೀತಿಯನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ. ನಮಗೆ ಇತರ ಸಚಿವಾಲಯಗಳ ಹಾಗೂ ಮಧ್ಯಸ್ಥಗಾರರ ಸಹಕಾರಬೇಕಿದೆ. ಸಾಧ್ಯವಾದಷ್ಟು ಬೇಗ ಅದನ್ನು ಅನುಸರಿಸುವಂತೆ ಕಾರ್ಯದರ್ಶಿಗೆ ಸೂಚಿಸಿದ ಗಡ್ಕರಿ, ಇದು ಉದ್ಯಮದ ಬೆಳವಣಿಗೆಗಳಲ್ಲಿ ಒಂದಾಗಿದ್ದು, ಈ ನೀತಿ ಉತ್ಪಾದನೆಯನ್ನು ತಗ್ಗಿಸುತ್ತದೆ ಎಂದು ಭಾರತೀಯ ವಾಹನ ತಯಾರಕ ಒಕ್ಕೂಟ (ಸಿಯಾಮ್) ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ನಲ್ಲಿ ಕೇಂದ್ರ ಸಚಿವರು ಹೇಳಿದರು.
ಅಡೆತಡೆಗಳು ಯಾವುವು ಎಂಬುದನ್ನು ನಾನು ಕಂಡುಕೊಳ್ಳುತ್ತೇನೆ. ನಾವು ಅದನ್ನು ತೆರವುಗೊಳಿಸಿ ಮುಂದೆ ಹೋಗುತ್ತೇವೆ ಎಂದರು.
ಕೊರೊನಾ ಬಿಕ್ಕಟ್ಟಿನಿಂದ ವಾಹನ ವಲಯಕ್ಕೆ ಕಳಪೆ ಬೇಡಿಕೆಯಿಂದಾಗಿ ಈಗಾಗಲೇ ಉದ್ಯಮ ಸಾಕಷ್ಟು ಕಷ್ಟಪಡುತ್ತಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ನಿಲ್ಲಿಸಿದೆ. ವ್ಯವಹಾರಗಳನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದರೂ ಸಹ ತಕ್ಷಣವೇ ವ್ಯವಹಾರಗಳು ಸಾಮಾನ್ಯತೆಗೆ ಮರಳುವುದಿಲ್ಲ. ಆಟೋಮೊಬೈಲ್ ಉದ್ಯಮವು ಪ್ರಸ್ತುತ, ತೀವ್ರ ಬೇಡಿಕೆಯನ್ನು ಎದುರುನೋಡುತ್ತಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೇಶಾದ್ಯಂತ 3ನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಇದು ತೆರವಾದ 10 ದಿನಗಳದೊಳಗೆ ಬಿಎಸ್ - 4 ವಾಹನಗಳ ಮಾರಾಟ ಮಾಡುವಂತೆ ಆಟೋಮೊಬೈಲ್ ವಿತರಕರಿಗೆ ಸುಪ್ರೀಂಕೋರ್ಟ್, ಮಾರ್ಚ್ 27ರಂದು ಅನುಮತಿ ನೀಡಿ ಆದೇಶ ಹೊರಡಿಸಿತ್ತು.
ಈ ಹಿಂದೆ ದೇಶಾದ್ಯಂತ ಭಾರತ್ ಸ್ಟೇಜ್-4 (ಬಿಎಸ್ IV) ವಾಹನಗಳ ಮಾರಾಟಕ್ಕೆ 2020ರ ಮಾರ್ಚ್ 31ರವರೆಗೆ ಗಡುವನ್ನು ಸುಪ್ರೀಂ ನೀಡಿತ್ತು. ಲಾಕ್‌ಡೌನ್ ನಂತರ ಈ 10 ದಿನಗಳ ಅವಧಿಯಲ್ಲಿ ಮಾರಾಟವಾಗದೇ ಉಳಿದ ಬಿಎಸ್ - 4 ವಾಹನಗಳಲ್ಲಿ ಕೇವಲ ಶೇ 10ರಷ್ಟು ಮಾರಾಟ ಮಾಡಲು ಅನುಮತಿ ನೀಡಲಾಗುವುದು ಎಂದು ಹೇಳಿತ್ತು.
ಭಾರತ್ ಸ್ಟೇಜ್ - 6 ವಾಹನ ನೋಂದಣಿ ಗಡುವನ್ನು ಮೂರು ತಿಂಗಳು ಮುಂದೂಡುವಂತೆ ಕೋರಿ ದ್ವಿಚಕ್ರ ವಾಹನ ಕಂಪನಿ ಹೀರೋ ಮೋಟೊಕಾರ್ಪ್, ಮಾರ್ಚ್ 20ರಂದು ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು.