ಬೈರುತ್: ಲೆಬನಾನ್ ದೇಶದ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡು ಕರೆನ್ಸಿಯ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದದ್ದಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು ರಾಜಧಾನಿಯಲ್ಲಿ ಬೀದಿಗಿಳಿದು ಟೈರ್ಗಳಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದೇಶಾದ್ಯಂತ ಪ್ರತಿಭಟನೆಗಳು ಪುನರಾರಂಭಗೊಂಡಿದ್ದು, ನಾಗರಿಕರು ಸಣ್ಣ ಪ್ರಮಾಣದಲ್ಲಿ ಜಮಾಯಿಸಿದ್ದರೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಲೆಬನಾನಿನ ಪೌಂಡ್ ತನ್ನ ಮೌಲ್ಯ ಕ್ಷೀಣಿಸಿಕೊಂಡಿದ್ದು, ಬ್ಲ್ಯಾಕ್ ಮಾರುಕಟ್ಟೆಯಲ್ಲಿ ಅಮೆರಿಕ ಡಾಲರ್ ವಿರುದ್ಧ 15,000 ಲೆಬನಾನಿ ಪೌಂಡ್ಗೆ ತಲುಪಿದೆ.
ಬೈರುತ್ನ ಮತ್ತೊಂದು ಕಡೆ ಯುವಕರ ಸಣ್ಣ ಗುಂಪುಗಳು ಕೆಲವು ಡ್ರೈವಿಂಗ್ ಸ್ಕೂಟರ್, ಅಂಗಡಿಗಳ ಕಿಟಕಿಗಳಿಗೆ ಕಲ್ಲು ತೂರಿದ್ಧಾರೆ. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ತೈಲ ದರ ಏರಿಕೆಗೆ ಭಯಭೀತರಾದ ವಾಹನ ಚಾಲಕರು ಗ್ಯಾಸ್ ಸ್ಟೇಷನ್‌ಗಳ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಯಾರೂ ಇಂಧನ ಸಂಗ್ರಹಿಸದಂತೆ ಪೊಲೀಸರು ಲೆಬನಾನ್‌ನ ದಕ್ಷಿಣದಲ್ಲಿ ಇರುವ ಕೆಲವು ಗ್ಯಾಸ್ ಸ್ಟೇಷನ್‌ಗಳಿಗೆ ತೆರಳಿ ನಿಗಾ ವಹಿಸಿದ್ದಾರೆ.
2019ರ ಅಕ್ಟೋಬರ್‌ನಿಂದ ಲೆಬನಾನ್ ಕರೆನ್ಸಿಯು ಶೇ 90ರಷ್ಟು ಮೌಲ್ಯ ಕಳೆದುಕೊಂಡಿದೆ. ಸರಕು ಮತ್ತು ನಿತ್ಯ ಬಳಕೆಯ ಉತ್ಪನ್ನಗಳ ಬೆಲೆಗಳು ಗಗನಕ್ಕೇರಿವೆ. ಈ ಮಧ್ಯೆ ಹಿರಿಯ ರಾಜಕಾರಣಿಗಳು ನೂತನ ಸರ್ಕಾರ ರಚಿಸಿ ಒಟ್ಟಾಗಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಕರೆನ್ಸಿ ಕುಸಿತವು ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಬಡತನಕ್ಕೆ ತಳ್ಳಿದೆ. ವಿದೇಶಿ ಕರೆನ್ಸಿ ನಿಕ್ಷೇಪಗಳನ್ನು ಸಹ ಖಾಲಿ ಮಾಡಿದೆ. ಮುಂಬರುವ ವಾರಗಳಲ್ಲಿ ಇಂಧನ ಸೇರಿದಂತೆ ಕೆಲವು ಮೂಲ ಸರಕುಗಳ ಸಬ್ಸಿಡಿಗಳಿಗೆ ಲೆಬನಾನ್‌ನ ಕೇಂದ್ರ ಬ್ಯಾಂಕ್ ಹಣಕಾಸು ಒದಗಿಸಲು ಸಾಧ್ಯವಾಗುವುದಿಲ್ಲ ಎಂಬ ಆತಂಕ ಜನರಲ್ಲಿ ವ್ಯಕ್ತವಾಗಿದೆ.