ನವದೆಹಲಿ: ಕಳೆದ ಐದು ವರ್ಷಗಳಲ್ಲಿ ನಗರ ಸಹಕಾರಿ ಬ್ಯಾಂಕ್ಗಳಲ್ಲಿ (ಯುಸಿಬಿ) ಸುಮಾರು 1,000 ವಂಚನೆ ಪ್ರಕರಣಗಳು ದಾಖಲಾಗಿದ್ದು, ಇದರ ಮೊತ್ತ ₹ 220 ಕೋಟಿಗೂ ಅಧಿಕಾವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಿಳಿಸಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಬ್ಯಾಂಕ್, 2018-19ರ ಅವಧಿಯಲ್ಲಿ ₹ 127.7 ಕೋಟಿ ಮೊತ್ತದ 181 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ.
2016-7 ಹಾಗೂ 2017-18ನೇ ಸಾಲಿನಲ್ಲಿ ಕ್ರಮವಾಗಿ 27 ಮತ್ತು 99 ಪ್ರಕರಣಗಳು ದಾಖಲಾಗಿವೆ. ಈ ಎರಡೂ ವರ್ಷಗಳ ಮೊತ್ತ ₹ 9.3 ಕೋಟಿ ಹಾಗೂ ₹ 46.9 ಕೋಟಿಯಷ್ಟಿದೆ. 2015-16ರಲ್ಲಿ 187 ಕೇಸ್ಗಳಿಂದ ₹ 17.3 ಕೋಟಿ ಮತ್ತು 2014-15ರಲ್ಲಿ 478 ವಂಚನೆ ಪ್ರಕರಣಗಳಿಂದ ₹ 19.8 ಕೋಟಿಯಷ್ಟು ಸಂಪತ್ತು ಕರಗಿದೆ.
2014-15 ಮತ್ತು 2018-19 ಅವಧಿಯ ನಡುವಿನಲ್ಲಿ 972 ಪ್ರಕರಣಗಳು ಕಂಡುಬಂದಿದ್ದು, ಇವುಗಳ ಮೊತ್ತ ₹ 221 ಕೋಟಿಯಷ್ಟಿದೆ. 'ಆರ್‌ಬಿಐಗೆ ವರದಿ ಮಾಡಲಾದ ವಂಚನೆ ಪ್ರಕರಣಗಳನ್ನು ಬ್ಯಾಂಕ್ಗಳು ಕ್ರಿಮಿನಲ್ ದೂರುಗಳಾಗಿ ದಾಖಲಿಸಿಕೊಳ್ಳಬೇಕಾಗುತ್ತದೆ. ಬ್ಯಾಂಕ್ಗಳ ಸಿಬ್ಬಂದಿ ತಮ್ಮ ಹೊಣೆಗಾರಿಕೆಯ ಬಗ್ಗೆ ಪರಿಶೀಲಿಸಬೇಕು. ಆಂತರಿಕ ವಿಚಾರಣೆಯ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಾಗುತ್ತದೆ' ಎಂದು ಕೇಂದ್ರ ಬ್ಯಾಂಕ್ ಹೇಳಿದೆ.