ತಿರುವನಂತಪುರಂ: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು, ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. 2016ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕೆಟ್ಟದಾಗಿ ತೆಗೆದುಕೊಂಡ ನೋಟು ರದ್ದತಿ ನಿರ್ಧಾರದ ನಂತರ ಅನೌಪಚಾರಿಕ ವಲಯವು ಅಸ್ತವ್ಯಸ್ತಗೊಂಡಿದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುತ್ತಿಲ್ಲ ಎಂದು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ ಆಯೋಜಿಸಿದ ವರ್ಚುವಲ್ ಶೃಂಗಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಚುನಾವಣೆಗೂ ಮುನ್ನ ಕೇರಳದ ಅಭಿವೃದ್ಧಿ ಚೌಕಟ್ಟು ವಿಷನ್ ಡಾಕ್ಯುಮೆಂಟ್ ಪ್ರಾರಂಭಿಸಲು ಶೃಂಗಸಭೆ ಆಯೋಜಿಸಲಾಗಿದೆ.
ಇದನ್ನೂ ಓದಿ: ಜಾಗತಿಕ ಕುಬೇರರ ಪಟ್ಟಿಯಲ್ಲಿ ಅಂಬಾನಿಗೆ 8ನೇ ಸ್ಥಾನ: ಕೊರೊನಾ ಮಧ್ಯೆ ಜಿಯೋ ಒಡೆಯ ಗಳಿಸಿದ್ದೆಷ್ಟು?
ಸಣ್ಣ ಮತ್ತು ಮಧ್ಯಮ ವಲಯದ ಮೇಲೆ ಪರಿಣಾಮ ಬೀರಬಹುದಾದ ಸಾಲದ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ನ ತಾತ್ಕಾಲಿಕ ಕ್ರಮಗಳು ನಮ್ಮನ್ನು ಕುರುಡಾಗಿಸುವುದಿಲ್ಲ. ನಿರುದ್ಯೋಗ ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯವು ಅಸ್ತವ್ಯಸ್ತವಾಗಿದೆ. ಇದೆಲ್ಲಾ 2016ರಲ್ಲಿ ತೆಗೆದುಕೊಂಡ ನೋಟುರದ್ದಿತಿಯ ಕೆಟ್ಟ ನಿರ್ಧಾರದಿಂದ ಉಂಟಾದ ಬಿಕ್ಕಟ್ಟು ಎಂದು 'ಪ್ರತೀಕ್ಷ 2030'ರಲ್ಲಿ ಹೇಳಿದರು.
ಕೇರಳ ಸೇರಿದಂತೆ ಇತರ ಅನೇಕ ರಾಜ್ಯಗಳು ಅತಿಯಾದ ಸಾಲವನ್ನು ಆಶ್ರಯಿಸಬೇಕಾಗಿ ಇರುವುದರಿಂದ ಸಾರ್ವಜನಿಕ ಹಣಕಾಸು ಅಸ್ತವ್ಯಸ್ತವಾಗಿದೆ. ಇದು ಭವಿಷ್ಯದ ಬಜೆಟ್ ಮೇಲೆ ಅತಿದೊಡ್ಡ ಹೊರೆ ಸೃಷ್ಟಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂವಿಧಾನದಲ್ಲಿ ಪ್ರತಿಪಾದಿಸಿರುವಂತೆ ಭಾರತದ ಆರ್ಥಿಕ ಮತ್ತು ರಾಜಕೀಯ ತತ್ವದ ಮೂಲಾಧಾರವಾದ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಗಳೊಂದಿಗೆ ನಿಯಮಿತ ಸಮಾಲೋಚನೆಯು ಈಗಿನ ಕೇಂದ್ರ ಸರ್ಕಾರದಲ್ಲಿ ಕಂಡುಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.