ನವದೆಹಲಿ: 2020ರ ಕ್ಯಾಲೆಂಡರ್ ವರ್ಷದ ಆರಂಭದಲ್ಲಿ ಏರುಗತಿಯಲ್ಲಿ ಸಾಗಿದ್ದ ಚಿನ್ನದ ದರವು ಕಳೆದ ಒಂದು ವಾರದಿಂದ ಇಳಿಮುಖವಾಗುತ್ತಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಚೀನಾ- ಅಮೆರಿಕದ ವಾಣಿಜ್ಯ ಸಮರ ತಹಬದಿಗೆ ಬಂದಿದ್ದು, ಉಭಯ ರಾಷ್ಟ್ರಗಳ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಅಮೆರಿಕವು ಕರೆನ್ಸಿ ಮ್ಯಾನಿಪ್ಯುಲೇಟರ್ ಆಗಿ ಚೀನಾದ ಹೆಸರನ್ನು ಕೈಬಿಟ್ಟಿದೆ. ಅಪಾಯದ ತೀವ್ರತೆ ಇಳಿಕೆಯಾದ ಕಾರಣ ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆ ತೀವ್ರವಾಗಿ ಕುಸಿತ ಕಂಡಿದೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನ (ಎಂಸಿಎಕ್ಸ್) ಫ್ಯೂಚರ್ ಮಾರುಕಟ್ಟೆಯಲ್ಲಿ ಮಂಗಳವಾರದಂದು ಪ್ರತಿ 10 ಗ್ರಾಂ. ಚಿನ್ನದ ದರದ ಮೇಲೆ ₹ 218 ಕುಸಿತವಾಗಿದೆ. ಬೆಳ್ಳಿಯ ಧಾರಣೆಯಲ್ಲಿ ಸಹ ಪ್ರತಿ ಕೆ.ಜಿ.ಯ ಮೇಲೆ ಶೇ 0.82ರಷ್ಟು ಇಳಿಕೆಯಾಗಿ ₹ 46,060ರಲ್ಲಿ ಮಾರಾಟ ಆಗುತ್ತಿದೆ.
2020ರ ಜನವರಿ 8ರಂದು 10 ಗ್ರಾಂ. ಚಿನ್ನದ ದರ ₹ 41,293ಕ್ಕೆ ಏರಿಕೆ ಆಗಿತ್ತು. ದೇಶಿಯ ಮಾರುಕಟ್ಟೆಯಲ್ಲಿ ಈ ಒಂದು ವಾರದಲ್ಲಿ ₹ 2,000 ಇಳಿಕೆಯಾದಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಬಂಗಾರದ ದರದಲ್ಲಿ ಶೇ 0.6ರಷ್ಟು ಇಳಿಕೆಯಾಗಿ 1,538 ಡಾಲರ್ಗೆ ತಲುಪಿದೆ.
"ಅಮೆರಿಕ-ಇರಾನ್ ಉದ್ವಿಗ್ನತೆ ಮತ್ತು ಯುಎಸ್-ಚೀನಾ ವ್ಯಾಪಾರ ಒಪ್ಪಂದದ ಬಗ್ಗೆ ಹೆಚ್ಚುತ್ತಿರುವ ಆಶಾವಾದವು ಚಿನ್ನದ ಮೇಲಿನ ಅಪಾಯದ ಪ್ರೀಮಿಯಂ ಅನ್ನು ಕಡಿಮೆ ಮಾಡಿದೆ ಎಂದು ಅಬಾನ್ಸ್ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಅಭಿಷೇಕ್ ಬನ್ಸಾಲ್ ಹೇಳಿದ್ದಾರೆ.