ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಎರಡನೇ ಅವಧಿಯಲ್ಲಿ ಆರ್ಥಿಕತೆಯು ಚೇತರಿಸಿಕೊಳ್ಳಲಿದೆ. ಗ್ರಾಹಕ ಅನುತ್ಪಾದಕತೆ ಮತ್ತು ಬ್ಯಾಂಕ್ಗ ಸಾಲ ನೀಡಿಕೆಯು ಏರಿಕೆ ಆಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ದೆಹಲಿಯಲ್ಲಿ ಸಾರ್ವಜನಿಕ, ಖಾಸಗಿ ಬ್ಯಾಂಕ್ಗಳ ಹಾಗೂ ಹಣಕಾಸುಯೇತರ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಯಾವುದೇ ಹಣಕಾಸು ಸಂಸ್ಥೆಗಳು ನಗದು ದ್ರವ್ಯತೆಯ ಅಭಾವ ಎದುರಿಸುತ್ತಿಲ್ಲ. ಸಭೆಯಲ್ಲಿ ಒಳ್ಳೆಯ ಮತ್ತು ಸಕಾರಾತ್ಮಕ ವಿಷಯಗಳನ್ನು ಕೇಳಿದ್ದೇನೆ ಎಂದು ಹೇಳಿದರು.
ಆರ್ಥಿಕ ಕುಸಿತದ ಪರಿಣಾಮದ ಕಾರ್ಮೋಡಗಳು ಸರಿಯುತ್ತಿವೆ. ಮುಂಬರುವ ಹಬ್ಬಗಳು ಆರ್ಥಿಕತೆ ಚೇತರಿಕೆಗೆ ಸಹಾಯ ಮಾಡಲಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಆರು ವರ್ಷಗಳ ಕನಿಷ್ಠ ಶೇಕಡಾ 5ಕ್ಕೆ ಇಳಿದಿದೆ ಎಂದರು.
ವಾಣಿಜ್ಯ ವಾಹನಗಳ ಮಾರಾಟದಲ್ಲಿನ ಕುಸಿತವು ಪ್ರವೃತ್ತಿ ಮತ್ತು ಮುಂದಿನ ಒಂದು ಅಥವಾ ಎರಡು ತ್ರೈಮಾಸಿಕಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಖಾಸಗಿ ವಲಯದ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ತಿಳಿಸಿವೆ ಎಂದು ಸಚಿವರು ಹೇಳಿದರು.