ನವದೆಹಲಿ : ದೇಶದಲ್ಲಿ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರತೆಯಿಲ್ಲ ಎಂಬುದನ್ನು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದರು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಕೆಟ್ಟ ಪರಿಣಾಮ ಬೀರುವ ಕೆಲವು ದೇಶಗಳಿಗೆ ಸೂಕ್ತ ಪ್ರಮಾಣದಲ್ಲಿ ಪ್ಯಾರಾಸಿಟಿಮೊಲ್ ಮತ್ತು ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್(ಹೆಚ್‌ಸಿಕ್ಯೂ) ರಫ್ತು ಮೇಲಿದ್ದ ನಿರ್ಬಂಧವನ್ನು ಭಾರತ ತಾತ್ಕಾಲಿಕವಾಗಿ ತೆಗೆದು ಹಾಕಿದೆ. ಅಮೆರಿಕಾ, ಬ್ರೆಜಿಲ್, ಶ್ರೀಲಂಕಾ ಸೇರಿ ಹಲವು ರಾಷ್ಟ್ರಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿ ಕಳಿಸುವಂತೆ ಭಾರತ ಸರ್ಕಾರವನ್ನು ಕೋರುತ್ತಿವೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಕೋವಿಡ್-19 ಅನುಮಾನಾಸ್ಪದ ಅಥವಾ ದೃಢಪಟ್ಟವರ ಆರೈಕೆಯಲ್ಲಿ ತೊಡಗಿರುವ ರೋಗ ಲಕ್ಷಣವಿಲ್ಲದ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಪ್ರಯೋಗಾಲದಿಂದ ದೃಢಪಟ್ಟ ಸೋಂಕಿತರ ಕುಟುಂಬದ ಲಕ್ಷಣರಹಿತ ಸದಸ್ಯರಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡುವಂತೆ ಶಿಫಾರಸು ಮಾಡಿದೆ.
ದೇಶದಲ್ಲಿ 5,194 ಕೊರೊನಾ ಸೋಂಕಿತರ ಸಕಾರಾತ್ಮಕ ಪ್ರಕ್ರಣಗಳು ದೃಢಪಟ್ಟಿವೆ. ಈವರೆಗೆ 402 ಜನರನ್ನು ಕ್ವಾರಂಟೈನ್ನಿಂದ ಬಿಡುಗಡೆ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ 773 ಸಕಾರಾತ್ಮಕ ಪ್ರಕರಣಗಳು ವರದಿಯಾಗಿವೆ. ಈವರೆಗೂ 149 ಸೋಂಕಿತರು ಮೃತಪಟ್ಟಿದ್ದಾರೆ. ನಿನ್ನೆ ಒಂದು ದಿನದಲ್ಲಿ 32 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.