ಜೂನ್ 21 ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ನಿರುದ್ಯೋಗ ದರ ಶೇ 8.5 ಕ್ಕೆ ಕುಸಿದಿದ್ದು, ಇದು ಲಾಕ್ಡೌನ್ ಮುನ್ನ ಇದ್ದ ನಿರುದ್ಯೋಗ ದರಕ್ಕೆ ಸಮನಾಗಿದೆ. ನಿರುದ್ಯೋಗ ದರವು ಮಾರ್ಚ್ನಲ್ಲಿ 8.75 ಇದ್ದದ್ದು ಏಪ್ರಿಲ್-ಮೇ ತಿಂಗಳಲ್ಲಿ ಶೇ 23.5 ಕ್ಕೆ ಏರಿಕೆಯಾಗಿತ್ತು. ಮೇ 3 ಕ್ಕೆ ಕೊನೆಯಾದ ವಾರದಲ್ಲಿ ಶೇ 27.1 ರಷ್ಟು ಅತಿ ಹೆಚ್ಚು ನಿರುದ್ಯೋಗ ದರ ದಾಖಲಾಗಿತ್ತು. ನಂತರದ ದಿನಗಳಲ್ಲಿ ಅಂದರೆ ಜೂನ್ ಆರಂಭದಿಂದ ನಿರುದ್ಯೋಗ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದೊಂದು ವಾರದಲ್ಲಿಯೇ ಶೇ 20 ರಷ್ಟು ನಿರುದ್ಯೋಗ ಪ್ರಮಾಣ ಕಡಿಮೆಯಾಗಿದೆ.
ಜೂನ್ ತಿಂಗಳ ಮೊದಲ ಮೂರು ವಾರಗಳಲ್ಲಿ ನಿರುದ್ಯೋಗ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣ ಕಡಿಮೆಯಾಗಿದೆಯಾದರೂ ಈ ಪ್ರಮಾಣ ಲಾಕ್ಡೌನ್ ಪೂರ್ವಕ್ಕಿಂತ ಹೆಚ್ಚಾಗಿಯೇ ಇದೆ. ಜೂನ್ 21 ಕ್ಕೆ ಕೊನೆಗೊಂಡ ವಾರದಲ್ಲಿ ಈ ಪ್ರಮಾಣ ಕುಸಿದು 11.2 ರಷ್ಟಿತ್ತು. ಈ ಪ್ರಮಾಣವು ಲಾಕ್ಡೌನ್ ಪೂರ್ವದ ಅವಧಿಗೆ ಹೋಲಿಸಿದರೆ 200 ಮೂಲಾಂಕಗಳಷ್ಟು ಅಂದರೆ ಸರಾಸರಿ ಶೇ 9 ಕ್ಕಿಂತ ಹೆಚ್ಚಾಗಿಯೇ ಇದೆ.
ಏಪ್ರಿಲ್-ಮೇ ತಿಂಗಳಲ್ಲಿ ದಾಖಲಾಗಿದ್ದ ಅತಿ ಹೆಚ್ಚು ನಿರುದ್ಯೋಗ ದರ 25.83 ಕ್ಕೆ ಹೋಲಿಸಿದರೆ ಜೂನ್ 12 ಕ್ಕೆ ಕೊನೆಗೊಂಡ ವಾರದಲ್ಲಿರುವ ಶೇ 11.2 ರ ನಿರುದ್ಯೋಗ ದರ ತೀರಾ ಕಡಿಮೆಯಾಗಿದೆ. ಆದರೆ ಲಾಕ್ಡೌನ್ ವಿಧಿಸುವುದಕ್ಕಿಂತ ಮೊದಲಿನ 13 ವಾರಗಳಲ್ಲಿದ್ದ ಸರಾಸರಿ ನಿರುದ್ಯೋಗ ದರ ಶೇ 9 ಕ್ಕೆ ಹೋಲಿಸಿದರೆ ಪ್ರಸ್ತುತ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ.
ದೇಶದ ಹಲವಾರು ನಗರ, ಪಟ್ಟಣ ಹಾಗೂ ಮಹಾನಗರಗಳಲ್ಲಿ ಎಂದಿನಂತೆ ವ್ಯಾಪಾರ ವಹಿವಾಟುಗಳು ನಿಧಾನವಾಗಿ ಚಿಗುರುತ್ತಿವೆ. ಮಹಾನಗರಗಳಲ್ಲಿನ ಮಾಲ್ಗಳು ಸಹ ತೆರೆದಿದ್ದು, ಜನ ನಿಧಾನವಾಗಿ ಮಾಲ್ಗಳಿಗೆ ಮತ್ತೆ ಹೋಗಲಾರಂಭಿಸಿದ್ದಾರೆ. ಜೊತೆಗೆ ಚಿಕ್ಕ ಪುಟ್ಟ ವ್ಯಾಪಾರಗಳು ಸಹ ಲಾಭ ಕಾಣಲಾರಂಭಿಸಿವೆ.
ಸದ್ಯದ ಪರಿಸ್ಥಿತಿಯಲ್ಲಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶಗಳು ಹೆಚ್ಚಾಗಲಾರಂಭಿಸಿವೆ. ಬರುವ ಕೆಲ ತಿಂಗಳಲ್ಲಿ ಗ್ರಾಮೀಣ ಉದ್ಯೋಗವಕಾಶ ದರ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಜೂನ್ 21 ಕ್ಕೆ ಕೊನೆಗೊಂಡ ವಾರದಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗ ದರವು ಶೇ 7.26 ಕ್ಕೆ ಕುಸಿದಿದೆ. ಮಾರ್ಚ್ 22 ಕ್ಕೆ ಕೊನೆಗೊಂಡ ವಾರದಲ್ಲಿ ಈ ದರ ಶೇ 8.3 ರಷ್ಟಿತ್ತು.
ಲಾಕ್ಡೌನ್ ತೆರವಾದ ನಂತರ ಸಹಜವಾಗಿಯೇ ನಿರುದ್ಯೋಗ ಪ್ರಮಾಣ ಕಡಿಮೆಯಾಗಿದೆಯಾದರೂ, ಗ್ರಾಮೀಣ ಭಾಗದಲ್ಲಿ ಮನರೇಗಾ ಕೂಲಿ ಕೆಲಸ ಹಾಗೂ ಮುಂಗಾರು ಹಂಗಾಮಿನ ಚಟುವಟಿಕೆಗಳಿಂದ ಉದ್ಯೋಗವಕಾಶಗಳು ಹೆಚ್ಚಾಗುತ್ತಿವೆ.
ಸೂಕ್ತ ಸಮಯದಲ್ಲಿ ಮನರೇಗಾ ಕೂಲಿ ಕೆಲಸಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡಿದ್ದರಿಂದ ಹಾಗೂ ಸಕಾಲಕ್ಕೆ ಮಳೆಯಾಗಿ ಬಿತ್ತನೆ ಆರಂಭವಾಗಿದ್ದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ.