ನವದೆಹಲಿ: ಬಜೆಟ್ ಮಂಡನೆಯ ಹೊಸ್ತಿಲಲ್ಲಿ ಕೇಂದ್ರ ಸರ್ಕಾರವು ತನ್ನ 50 ಲಕ್ಷ ಉದ್ಯೋಗಿಗಳು ಮತ್ತು 61 ಲಕ್ಷ ಪಿಂಚಣಿದಾರರಿಗೆ ಕೆಲವು ಒಳ್ಳೆಯ ಸುದ್ದಿಗಳನ್ನು ನೀಡಲಿದ್ದು, ಪ್ರಸ್ತುತ ಹಣದುಬ್ಬರ ದರಕ್ಕೆ ಅನುಗುಣವಾಗಿ ತುಟ್ಟಿ ಭತ್ಯೆ (ಡಿಎ) ಮತ್ತು ತುಟ್ಟಿ ಭತ್ಯ ಪರಿಹಾರ (ಡಿಆರ್) ಹೆಚ್ಚಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಹಿಂಜರಿತದಿಂದಾಗಿ 2020ರ ಏಪ್ರಿಲ್‌ನಿಂದ ಸ್ಥಗಿತಗೊಂಡಿದ್ದ ಶೇ 4ರಷ್ಟು ತುಟ್ಟಿ ಭತ್ಯೆ (ಡಿಎ) ಹೆಚ್ಚಳವನ್ನು ಕೇಂದ್ರವು ಪುನಃ ನೀಡುವ ನಿರೀಕ್ಷೆಗಳು ದಟ್ಟವಾಗಿವೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ 17ರಷ್ಟಿದ್ದು, 2021ರ ಜುಲೈರವರೆಗೆ ಡಿಎನಲ್ಲಿ 4 ಪ್ರತಿಶತದಷ್ಟು ಹೆಚ್ಚಳವನ್ನು ಕೇಂದ್ರವು ನಿಲ್ಲಿಸಿದೆ. 7ನೇ ಕೇಂದ್ರ ವೇತನ ಆಯೋಗದ ಶಿಫಾರಸು ಆಧಾರದ ಮೇಲೆ ಸೂತ್ರದ ಪ್ರಕಾರ ಡಿಎ ಹೆಚ್ಚಳ ನಿರೀಕ್ಷಿಸಲಾಗಿದೆ.
ಕೇಂದ್ರ ಸರ್ಕಾರದ ನೌಕರರು ಮತ್ತು ಕಾರ್ಮಿಕರ ಸಂಘಗಳ ನೌಕರರ ಒಕ್ಕೂಟವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೇಂದ್ರ ಖಜಾನೆಯ ಪ್ರಸ್ತುತ ಸ್ಥಿತಿಯ ಬಗ್ಗೆ ತಿಳಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಪ್ರಸ್ತುತ ಹಣದುಬ್ಬರ ದರಕ್ಕೆ ಅನುಗುಣವಾಗಿ ಅರ್ಹ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ) ನೀಡುವಂತೆ ಹಣಕಾಸು ಸಚಿವರನ್ನು ಒತ್ತಾಯಿಸಿದರು.
ಇದನ್ನೂ ಓದಿ: 2025ರ ಒಳಗೆ ಶೇ.50 ರಷ್ಟು ರಸ್ತೆ ಅಪಘಾತ ಇಳಿಸುವ ಗುರಿ: ನಿತಿನ್ ಗಡ್ಕರಿ
ಬೆಲೆ ಏರಿಕೆ ಮತ್ತು ಹಣದುಬ್ಬರ ಸರಿದೂಗಿಸಲು ಕೇಂದ್ರ ಸರ್ಕಾರ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಿಸುತ್ತದೆ. ಡಿಎಯನ್ನು ಶೇ 4ರಷ್ಟು ಹೆಚ್ಚಿಸುವ ಕೊನೆಯ ಪ್ರಸ್ತಾಪ 2020ರ ಜನವರಿಯಲ್ಲಿ ಮಂಡಿಸಲಾಗಿತ್ತು. 2020ರ ಮಾರ್ಚ್‌ನಲ್ಲಿ ಡಿಎ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿತ್ತು.
ತುಟ್ಟಿ ಭತ್ಯೆ ಹೆಚ್ಚಳವು ಸುಮಾರು 50 ಲಕ್ಷ ಉದ್ಯೋಗಿಗಳಿಗೆ ಮತ್ತು 60 ಲಕ್ಷ ಪಿಂಚಣಿದಾರರಿಗೆ ತುಟ್ಟಿ ಭತ್ಯ ಪರಿಹಾರ ಲಭ್ಯವಾಗಲಿದೆ. ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಅಸ್ಥಿರತೆಯಿಂದಾಗಿ ಕೇಂದ್ರ ಸಂಬಳ ಮತ್ತು ಪಿಂಚಣಿ ಸ್ವೀಕರಿಸುವವರಿಗೆ ಡಿಎ ಹೆಚ್ಚಳವಾಗಲಿಲ್ಲ.