ನವದೆಹಲಿ: ದೇಶದಲ್ಲಿ ಕೋವಿಡ್ 2ನೇ ಅಲೆ ಹೊಡೆತದ ಪರಿಣಾಮದ ಹೊರತಾಗಿಯೂ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. 2021-22ರ ಮೊದಲ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆ ಶೇಕಡಾ 20.1 ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಡಿಮೆ ಆರ್ಥಿಕ ವೃದ್ಧಿಯಾಗಿದೆ. ಆಗ ಕೊರೊನಾ ವೈರಸ್‌ನಿಂದಾಗಿ ದೇಶ ಸಂಪೂರ್ಣವಾಗಿ ಲಾಕ್‌ಡೌನ್ ಆಗಿತ್ತು.
ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, 2020-21ರ ಅನುಗುಣವಾದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನವು (GDP) ಶೇಕಡಾ 24.4 ರಷ್ಟು ಕುಗ್ಗಿತ್ತು.
ಆರೋಗ್ಯಕರ ಜಿಡಿಪಿ ಬೆಳವಣಿಗೆಯ ಸಂಖ್ಯೆಗಳು ಮುಖ್ಯವಾಗಿ ಬೇಸ್ ಎಫೆಕ್ಟ್ ನಿಂದಾಗಿವೆ. ಆದರೆ ಇದು ಕೋವಿಡ್ 2.0 ಹೊರತಾಗಿಯೂ, ಆರ್ಥಿಕ ಚಟುವಟಿಕೆಗಳು ಜೀವಂತವಾಗಿರುವುದನ್ನು ಸೂಚಿಸುತ್ತದೆ. ಏಕೆಂದರೆ ಸ್ಥಳೀಯ ಮತ್ತು ಪ್ರಾದೇಶಿಕ ನಿರ್ಬಂಧಗಳು ಕೋವಿಡ್ 1.0 ನಲ್ಲಿ ಇದ್ದಂತೆ ಇಲ್ಲವೆಂದು ಭಾರತದ ರೇಟಿಂಗ್ಸ್ ಮತ್ತು ಸಂಶೋಧನೆಯ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ತ್ರೈಮಾಸಿಕದಲ್ಲಿ ಬೆಳವಣಿಗೆ ಕಡಿಮೆ ಎಂದು ಅಂದಾಜಿಸಿದ್ದರೂ, ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆ, ಆಟೋಮೊಬೈಲ್ ಮಾರಾಟ ಮತ್ತು ಇಂಧನ ಬಳಕೆ ಮುಂತಾದ ಹಲವು ಅಧಿಕ-ಆವರ್ತನ ಸೂಚಕಗಳು ಬಿಡುಗಡೆಯಾಗಿವೆ. ರೈಲ್ವೆ ಸರಕು ಸಾಗಣಿಕೆಯು ಕೋವಿಡ್ 2ನೇ ಅಲೆಯ ಹೊರತಾಗಿಯೂ ಆರ್ಥಿಕ ಚಟುವಟಿಕೆಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. 2ನೇ ಅಲೆ ವೇಳೆ ದೇಶದಲ್ಲಿ 2,50,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಮೊದಲ ಕೋವಿಡ್ ಅಲೆ ವೇಳೆ ಆರ್ಥಿಕ ನಷ್ಟ ಅನುಭವಿಸಿದ್ದ ಹಲವು ಕಂಪನಿಗಳು 2ನೇ ಅಲೆ ಬಳಿಕ ಸಡಿಲಿಕೆಯಾದ ನಿರ್ಬಂಧಗಳಿಂದ ಮತ್ತೆ ಹಳಿಗೆ ಮರಳಿ ವೇಗವನ್ನು ಪಡೆದುಕೊಂಡಿವೆ.
ಇದನ್ನೂ ಓದಿ: ಕೊರೊನಾ 2.0 ಹೊಡೆತಕ್ಕೆ ತಲೆಕೆಳಗಾದ RBIನ ಆರ್ಥಿಕ ಬೆಳವಣಿಗೆ ಅಂದಾಜು