ನವದೆಹಲಿ: ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆದ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್ಆರ್) ಮೇಲೆ 10 ಬೇಸಿಸ್ ಪಾಯಿಂಟ್ಗಳನ್ನು ಕಡಿತಗೊಳಿಸಿದೆ.
ಪರಿಷ್ಕೃತ ನೂತನ ಬಡ್ಡಿ ದರವು ಅಕ್ಟೋಬರ್ 10ರಿಂದ ಜಾರಿಗೆ ಬರುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ, ಆರನೇ ಬಾರಿಗೆ ಎಂಸಿಎಲ್ಆರ್ನಲ್ಲಿ ಕಡಿತಗೊಳಿಸಿದೆ. ಈ ದರ ಕಡಿತವು ರೆಪೊ ಲಿಂಕ್ನ ಬಡ್ಡಿದರಕ್ಕೆ ಅನ್ವಯಿಸುವುದಿಲ್ಲ ಎಂದು ಎಸ್ಬಿಐ ತಿಳಿಸಿದೆ.
ಹಬ್ಬಗಳ ಅವಧಿ ಮತ್ತು ಪ್ರಸ್ತುತ ದಿನಗಳಲ್ಲಿನ ಲಾಭವನ್ನು ಎಲ್ಲ ಗ್ರಾಹಕರಿಗೆ ವರ್ಗಾಯಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಂಸಿಎಲ್ಆರ್ನಲ್ಲಿ 10 ಬೇಸಿಸ್ ಪಾಯಿಂಟ್ ಕಡಿತಗೊಂಡಿದ್ದು, ಇದು ದೇಶಾದ್ಯಂತ ಅನ್ವಯಿಸಲಿದೆ ಎಂದು ಬ್ಯಾಂಕ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಸಿಎಲ್ಆರ್ ಇಳಿಕೆಯಿಂದ ಬಡ್ಡಿದರ ಪ್ರಮಾಣವು 8.15ರಿಂದ ಶೇ 5.05ರವರೆಗೆ ಲಭ್ಯವಾಗಲಿದೆ. ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಸತತ ಐದನೇ ಬಾರಿ ರೆಪೋ ದರವನ್ನು ಇಳಿಕೆ ಮಾಡಿದೆ. ಕಳೆದ ಒಂಭತ್ತು ವರ್ಷಗಳಲ್ಲೇ ಅತಿ ಕಡಿಮೆ ರೆಪೋ (ಶೇ 5.15ರಷ್ಟು) ಇದಾಗಿದೆ.