ಅಹಮದಾಬಾದ್: ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾದ ಸರ್ದಾರ್ ಸರೋವರ ಅಣೆಕಟ್ಟೆ ಈ ಹಿಂದಿನ ಎಲ್ಲ ದಾಖಲೆಗಳನ್ನು ಅಳಿಸಿಹಾಕಿ 'ಆಲ್ ಟೈಮ್ ಹೈ' ಮಟ್ಟದಲ್ಲಿ ನೀರು ಸಂಗ್ರಹ ಮಾಡಿಕೊಂಡಿದೆ.
ನರ್ಮದಾ ನದಿ ಪಾತ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಶನಿವಾರದ ವೇಳೆಗೆ ಜಲಾಶಯದಲ್ಲಿ 131.5 ಮೀಟರ್ ಎತ್ತರಕ್ಕೆ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯ 30 ಗೇಟ್ಗಳಲ್ಲಿ 22 ಗೇಟ್ಗಳಿಂದು ಹೆಚ್ಚುವರಿ ನೀರು ಹೊರ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ್ದಾರ್ ಸರೋವರ್ ಅಣೆಕಟ್ಟೆಯಿಂದ 96,000 ಕ್ಯೂಸೆಕ್ ನೀರು ಹರಿ ಬಿಟ್ಟಿದ್ದರಿಂದ ನರ್ಮದಾ ಮತ್ತು ಭರುಚಿ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಬಹುದು. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ರವಾನಿಸಿದ್ದಾರೆ.
ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣ ಮಾಡಿದ ಬಳಿಕ ಪ್ರಥಮ ಬಾರಿಗೆ ಗರಿಷ್ಠ 138 ಮೀಟರ್ ಎತ್ತರ ಸಾಮರ್ಥ್ಯದಲ್ಲಿ 131.5 ಮೀಟರ್ ಎತ್ತರದವೆರೆಗೂ ನೀರು ತಲುಪಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.