ನವದೆಹಲಿ: 15ನೇ ಹಣಕಾಸು ಆಯೋಗದ ಶಿಫಾರಸು ಮಾಡಿದಂತೆ ಕೊರೊನಾ ಸಾಂಕ್ರಾಮಿಕ ಪ್ರೇರೇಪಿತ ಆದಾಯ ಕೊರತೆ ಅನುದಾನದ 11ನೇ ಸಮ ಮಾಸಿಕ ಕಂತಿನಡಿ 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ರಾಜ್ಯಗಳಿಗೆ 6,195 ಕೋಟಿ ರೂ. ಮಾಸಿಕ ನಂತರದ ಹಂಚಿಕೆ ಆದಾಯ ಕೊರತೆ (ಪಿಡಿಆರ್ಡಿ) ಅನುದಾನವನ್ನು ಖರ್ಚು-ವೆಚ್ಚ ಇಲಾಖೆ ಬಿಡುಗಡೆ ಮಾಡಿದೆ. ಇದು ಪಿಡಿಆರ್ಡಿ ಅನುದಾನದ 11ನೇ ಕಂತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ 68,146 ಕೋಟಿ ರೂ. ಅರ್ಹ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಿಡಿಆರ್ಡಿ ಅನುದಾನವನ್ನು ಸಂವಿಧಾನದ 275ನೇ ವಿಧಿ ಅಡಿಯಲ್ಲಿ ರಾಜ್ಯಗಳಿಗೆ ನೀಡಲಾಗುತ್ತದೆ. ಅಧಿಕಾರ ಹಂಚಿಕೆಯ ನಂತರದ ರಾಜ್ಯಗಳ ಆದಾಯ ಖಾತೆಗಳಲ್ಲಿನ ಅಂತರವನ್ನು ಪೂರೈಸಲು 15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಅನುದಾನವನ್ನು ಮಾಸಿಕ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆಯೋಗವು 14 ರಾಜ್ಯಗಳಿಗೆ ಪಿಡಿಆರ್ಡಿ ಅನುದಾನವನ್ನು ಶಿಫಾರಸು ಮಾಡಿದೆ.
ಈ ಅನುದಾನ ಸ್ವೀಕರಿಸಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು 2020-21ರ ಆರ್ಥಿಕ ವರ್ಷದ ಮೌಲ್ಯಮಾಪನ ಹಂಚಿಕೆಯನ್ನು ಗಣನೆಗೆ ತೆಗೆದುಕೊಂಡ ನಂತರ ಆದಾಯ ಮತ್ತು ಖರ್ಚಿನ ಮೌಲ್ಯಮಾಪನ ನಡುವಿನ ಅಂತರ ಆಧರಿಸಿ ಆಯೋಗವು ನಿರ್ಧರಿಸಿತು.
ಇದನ್ನೂ ಓದಿ: ಸತತ 5ನೇ ದಿನವೂ ಗೂಳಿ ಓಟು ಮುಂದುವರಿಕೆ: ಇಂದಿನ ಸೆನ್ಸೆಕ್ಸ್, ನಿಫ್ಟಿ ಏರಿಕೆ ಹೀಗಿದೆ
15ನೇ ಹಣಕಾಸು ಆಯೋಗವು 2020-21ರ ಆರ್ಥಿಕ ವರ್ಷದಲ್ಲಿ 14 ರಾಜ್ಯಗಳಿಗೆ ಒಟ್ಟು 74,341 ಕೋಟಿ ರೂ. ಪಿಡಿಆರ್ಡಿ ಅನುದಾನವನ್ನು ಶಿಫಾರಸು ಮಾಡಿದೆ. ಈ ಪೈಕಿ ಇದುವರೆಗೆ 68,145.9 ಕೋಟಿ ರೂ. (ಶೇ 91.66ರಷ್ಟು) ಬಿಡುಗಡೆಯಾಗಿದೆ.
ಆಂಧ್ರಪ್ರದೇಶ, ಅಸ್ಸೊಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಬಿಡುಗಡೆಯಾಗಿದೆ.