ನವದೆಹಲಿ: ವೇತನ ಹೊರತಾದ ಆದಾಯದಿಂದ ಕಡಿತಗೊಳ್ಳುತ್ತಿದ್ದ ಟಿಡಿಎಸ್ ಹಾಗೂ ಟಿಸಿಎಸ್ (ಮೂಲದಿಂದ ತೆರಿಗೆ ಸಂಗ್ರಹ) ಮೊತ್ತ ಶೇ 25ರಷ್ಟು ಕಡಿತಗೊಳಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ (ಬುಧವಾರ) ಘೋಷಿಸಿದ್ದರು.
50,000 ಕೋಟಿ ರೂ. ಮೊತ್ತವು ತೆರಿಗೆಯಾಗಿ ಪಾವತಿಯಾಗುವ ಬದಲು, ಗುತ್ತಿಗೆ, ವೃತ್ತಿಪರ ಶುಲ್ಕ, ಬಡ್ಡಿ, ಬಾಡಿಗೆ, ಲಾಭಾಂಶ ವಿತರಣೆ, ಕಮಿಷನ್ ಮತ್ತು ಬ್ರೋಕರೇಜ್ ಆದಾಯವಾಗಿ ಬಳಕೆಗೆ ಸಿಗಲಿದೆ. ಇಂದಿನಿಂದಲೇ ಅನ್ವಯವಾಗಲಿದ್ದು, ಈ ವಿತ್ತೀಯ ವರ್ಷದ ಉಳಿದ ಅವಧಿ ಯವರೆಗೆ ಚಾಲ್ತಿಯಲ್ಲಿರಲಿದೆ.
ಶೇ 25ರ ಕಡಿತವು ಮಾಸಿಕ 50,000 ರೂ.ಗಿಂತ ಹೆಚ್ಚಿನ ಬಾಡಿಗೆಯ ಮೇಲೆ ವಿಧಿಸಲಾಗುವ ಟಿಡಿಎಸ್, ಮ್ಯೂಚುವಲ್ ಫಂಡ್ ಮತ್ತು ಕಂಪನಿಗಳ ಲಾಭಾಂಶ ವಿತರಣೆ, ನಿಗದಿತ ಠೇವಣಿ ಮೇಲಿನ ಟಿಡಿಎಸ್ ಇತ್ಯಾದಿಗಳ ಪಾವತಿಗೆ ಅನ್ವಯವಾಗುತ್ತದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206 ಎಎ ನಿಬಂಧನೆಗಳ ಪ್ರಕಾರ ಈ ವರ್ಗದ ತೆರಿಗೆದಾರರಿಗೆ ತೆರಿಗೆಯನ್ನು ಶೇ 20 ಅಥವಾ ಅದಕ್ಕಿಂತ ಹೆಚ್ಚಿನ ದರದಲ್ಲಿ ಕಡಿತಗೊಳಿಸಬೇಕಾಗುತ್ತದೆ.