ಮುಂಬೈ: ವಿಶ್ವದ ಅತಿದೊಡ್ಡ ವ್ಯಾಪಾರದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ (ಆರ್‌ಸಿಇಪಿ) ಹೊರಗುಳಿಯಲು ಭಾರತ ಸರ್ಕಾರ ನಿರ್ಧರಿಸಿದ್ದು, ಭಾರತಕ್ಕೆ ಸಿಗಬಹುದಾದ ಮಾರುಕಟ್ಟೆ ಅಂದಾಜನ್ನು ವಿಶ್ವ ವಾಣಿಜ್ಯ ಕೇಂದ್ರವು ತನ್ನ ಅಧ್ಯಯನದ ಮೂಲಕ ಬಹಿರಂಗಪಡಿಸಿದೆ.
ಗುರುತಿಸಲ್ಪಟ್ಟ 24 ಉತ್ಪನ್ನ ವಿಭಾಗಗಳಲ್ಲಿ ದೇಶೀಯ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕತೆ ಸುಧಾರಿಸಿದರೆ, ಆರ್ಸಿಇಪಿಯ 15 ರಾಷ್ಟ್ರಗಳ ಗುಂಪು 125 ಬಿಲಿಯನ್ ಡಾಲರ್ ಮಾರುಕಟ್ಟೆ ಸೃಷ್ಟಿಸಿಕೊಡುತ್ತಿದ್ದವು. ಆದರೆ, ಕೇಂದ್ರ ಸರ್ಕಾರವು ದೇಶಿಯ ಕಳವಳಗಳನ್ನು ಉಲ್ಲೇಖಿಸಿ ಕಳೆದ ವರ್ಷ ನವೆಂಬರ್ 16ರಂದು ಆರ್‌ಸಿಇಪಿ ಒಪ್ಪಂದದಿಂದ ಹೊರನಡೆಯಿತು.
15 ಆರ್‌ಸಿಇಪಿ ದೇಶಗಳು ಒಟ್ಟಾಗಿ ಶೇ 57ರಷ್ಟು ಅಥವಾ ಭಾರತದ 2019ರ ಹಣಕಾಸು ವರ್ಷದ ಒಟ್ಟಾರೆ ವ್ಯಾಪಾರ ಕೊರತೆಯ 105 ಬಿಲಿಯನ್ ಡಾಲರ್‌ಗಳಷ್ಟು ಹೊಂದಿದೆ. ಇದರಲ್ಲಿ ಚೀನಾದ ಪಾಲು 54 ಬಿಲಿಯನ್ ಡಾಲರ್ನಷ್ಟಿದೆ.
ಜಾಗತಿಕವಾಗಿ ಈ 24 ಉತ್ಪನ್ನ ವಿಭಾಗಗಳನ್ನು ರಫ್ತು ಮಾಡುವ ಅಗ್ರ 15 ರಾಷ್ಟ್ರಗಳ ಪೈಕಿ ಭಾರತದ ಜೊತೆಗೆ ಚೀನಾ, ಕೊರಿಯಾ, ಆಸ್ಟ್ರೇಲಿಯಾ, ಜಪಾನ್, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ಮಲೇಷ್ಯಾ, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ವಿಯೆಟ್ನಾಂಗಳಲ್ಲಿ ಕೂಡ ಬಲವಾದ ಬೇಡಿಕೆ ಇದೆ.
10 ಆರ್‌ಸಿಇಪಿ ದೇಶಗಳಲ್ಲಿ ದೇಶಿಯ ಉದ್ಯಮವು 125.6 ಬಿಲಿಯನ್ ಡಾಲರ್ ಮಾರುಕಟ್ಟೆ ಸಾಮರ್ಥ್ಯವಿದೆ. ವಿಶೇಷವಾಗಿ ಲೋಹಗಳು, ಜವಳಿ ಮತ್ತು ಸಾಗರ ಉತ್ಪನ್ನಗಳಂತಹ ವಲಯಗಳಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ಇತ್ತೀಚಿನ ಯುಎನ್ ಕಾಂಟ್ರೇಡ್ ದತ್ತಾಂಶ ಉಲ್ಲೇಖಿಸಿ ವಿಶ್ವ ವಾಣಿಜ್ಯ ಕೇಂದ್ರ ಮುಂಬೈ ಹೇಳಿದೆ.
ಭಾರತವು ವಿಶ್ವದಲ್ಲಿ ಅಲ್ಯೂಮಿನಿಯಂ ಉತ್ಪನ್ನಗಳನ್ನು ರಫ್ತು ಮಾಡುವ ಏಳನೇ ಅಗ್ರಗಣ್ಯ ರಾಷ್ಟ್ರವಾಗಿದೆ. 2018ರಲ್ಲಿ ಜಪಾನ್, ಥೈಲ್ಯಾಂಡ್, ಕೊರಿಯಾ ಮತ್ತು ಚೀನಾ ಒಟ್ಟಾಗಿ 18.65 ಶತಕೋಟಿ ಡಾಲರ್ ಮೌಲ್ಯದ ಅಲ್ಯೂಮಿನಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದವು.
ಕೈಮಗ್ಗದ ಜವಳಿ ರಫ್ತು ಮಾಡುವಲ್ಲಿ ಭಾರತ ಆರನೇ ಸ್ಥಾನದಲ್ಲಿದ್ದು, ಅಮೆರಿಕ, ಟರ್ಕಿ, ಬ್ರೆಜಿಲ್, ಬಾಂಗ್ಲಾದೇಶ ಮತ್ತು ಯುಎಇ ಅಗ್ರ ಸ್ಥಾನಗಳಲ್ಲಿವೆ. ಆದರೆ ವಿಯೆಟ್ನಾಂ, ಇಂಡೋನೇಷ್ಯಾ, ಚೀನಾ ಮತ್ತು ಕಾಂಬೋಡಿಯಾದಲ್ಲಿ ಕೈಮಗ್ಗದ ಬಟ್ಟೆಗಳಿಗೆ 10 ಬಿಲಿಯನ್ ಡಾಲರ್ನಷ್ಟು ಆಮದು ಬೇಡಿಕೆ ಇದೆ.
ಜವಳಿ ನೂಲುಗಳ ಎರಡನೇ ಅತಿದೊಡ್ಡ ರಫ್ತುದಾರ ಆಗಿರುವುದರಿಂದ ಚೀನಾ, ಕೊರಿಯಾ, ಜಪಾನ್ ಮತ್ತು ವಿಯೆಟ್ನಾಂನಿಂದ 13.6 ಬಿಲಿಯನ್ ಡಾಲರ್ನಷ್ಟು ವಾರ್ಷಿಕ ಆಮದು ಬೇಡಿಕೆ ಪೂರೈಸುವ ಮೂಲಕ ಭಾರತವು ಲಾಭ ಪಡೆಯಬಹುದಿತ್ತು. ಗೋ ಮಾಂಸ ಅತಿಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ 4ನೇ ದೇಶ ಭಾರತ ಆಗಿದ್ದು, ಆಯ್ದ ಆರ್‌ಸಿಇಪಿ ದೇಶಗಳಲ್ಲಿ 11 ಬಿಲಿಯನ್ ಡಾಲರ್ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕಿತ್ತ ಎಂದು ಡಬ್ಲ್ಯುಟಿಸಿ ಹೇಳಿದೆ.