ಲಂಡನ್: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಬ್ರಿಟನ್ನ ಪ್ರತಿಷ್ಠಿತ 'ಬ್ಯಾಂಕ್ ಆಫ್ ಇಂಗ್ಲೆಂಡ್'ನ (ಬಿಒಇ) ಮುಖ್ಯಸ್ಥ ಹುದ್ದೆಯಿಂದ ಹಿಂದೆ ಸರಿದಿದ್ದಾರೆ.
'ಆ ದೇಶದೊಳಗಿನ ರಾಜಕೀಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಅದನ್ನು ಹೇಗೆ ಕೊಂಡೊಯ್ಯಬೇಕು ಎಂಬುದರ ಬಗ್ಗೆ ತಿಳಿದವರು ನೇಮಕವಾಗುವುದು ಉತ್ತಮ. ನಾನು ಹೊರಗಿನವನು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತು. ಆ ದೇಶದ ರಾಜಕೀಯದ ಆಳ ಮತ್ತು ಹರಿವಿನ ಬಗ್ಗೆ ನನಗೆ ಬಹಳ ಕಡಿಮೆ ತಿಳಿವಳಿಕೆ ಇದೆ' ಎಂದು ರಾಜನ್ ಅವರು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ಬಿಒಇ'ನ ಉನ್ನತ ಹುದ್ದೆಯಲ್ಲಿರುವ ಮಾರ್ಕ್ ಕಾರ್ನೆ ಅವರ ಅವಧಿ ಜನವರಿಗೆ ಕೊನೆಗೊಳ್ಳಲಿದೆ. ಇಂಗ್ಲೆಂಡಿನ ಪ್ರತಿಷ್ಠಿತ ಬ್ಯಾಂಕ್ನ ಉತ್ತರಾಧಿಕಾರಿಗಾಗಿ ಇಲ್ಲಿನ ಸರ್ಕಾರ ಈಗಾಗಲೇ ಹುಡುಕಾಟ ನಡೆಸುತ್ತಿದೆ. ಇತ್ತೀಚಿನ ದಿನಗಳಲ್ಲಿನ ಬ್ರೆಕ್ಸಿಟ್ ವಿವಾದ ಯುರೋಪಿಯನ್ ಒಕ್ಕೂಟದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಕೆಲವು ಪ್ರಮುಖ ಆರ್ಥಿಕ ತಜ್ಞರು ಈ ಬ್ಯಾಂಕ್ ಉನ್ನತ ಹುದ್ದೆಗೆ ಏರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ರಾಜನ್ ಅವರು, ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಿಕ ತಜ್ಞ ಹಾಗೂ ಚಿಕಾಗೊ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ನನ್ನ ಕೆಲಸದಲ್ಲಿ ನಾನು ಸಂಪೂರ್ಣವಾಗಿ ಸಂತೋಷವಾಗಿದ್ದೇನೆ. ನಾನು ಯಾವುದೇ ಕೆಲಸಕ್ಕೆ ಅರ್ಜಿ ಸಲ್ಲಿಸಿಲ್ಲ' ಎಂದು ಹೇಳಿದ್ದಾರೆ.
ಏಪ್ರಿಲ್ ತಿಂಗಳಲ್ಲೇ ಎಕ್ಸ್‌ಚೀಕರ್‌ನ ಛಾನ್ಸ್ಲರ್ ಫಿಲಿಪ್ ಹ್ಯಾಮಂಡ್ ಅವರು ಕಾರ್ನೆ ಸ್ಥಾನಕ್ಕೆ ಬದಲಿ ನಾಯಕನ ಹುಡುಕಾಟವನ್ನು ಆರಂಭಿಸಿದರು. ಸುಮಾರು 30 ಅರ್ಜಿಗಳು ಸ್ವೀಕರಿಸಿದ್ದರು. ಇಲ್ಲಿನ ಟ್ರಸರಿ ಪ್ರಕಾರ, ಹ್ಯಾಮಂಡ್ ಅವರು ಜನವರಿ ತಿಂಗಳಲ್ಲಿ ರಾಜನ್ ಅವರನ್ನು ಭೇಟಿಯಾಗಿದ್ದರು. ಆದರೆ, ಸೆಂಟ್ರಲ್ ಬ್ಯಾಂಕ್ ಮುನ್ನಡಸಿಕೊಂಡು ಹೋಗಲು ಸಂಪರ್ಕಿಸಿದ್ದರೇ ಎಂಬುದರ ಬಗ್ಗೆ ಸಂದರ್ಶನದಲ್ಲಿ ಹೇಳಲು ರಾಜನ್ ಅವರು ನಿರಾಕರಿಸಿದ್ದಾರೆ.