ನವದೆಹಲಿ: ಪ್ರಯಾಣಿಕರು ರಾತ್ರಿಯ ಪ್ರಯಾಣದಲ್ಲಿ ತಮ್ಮ ಮೊಬೈಲ್ ಚಾರ್ಜ್ ಮಾಡಲು ಅನುಮತಿಸದಂತೆ ಭಾರತೀಯ ರೈಲ್ವೆಯು ಶೀಘ್ರದಲ್ಲೇ ನಿರ್ದೇಶನ ಹೊರಡಿಸಲಿದೆ ಎನ್ನಲಾಗುತ್ತಿದೆ.
ಕೆಲವು ರೈಲುಗಳಲ್ಲಿ ಬೆಂಕಿ ಅವಘಡದ ಘಟನೆಗಳು ವರದಿಯಾದ ನಂತರ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾತ್ರಿ ವೇಳೆ ರೈಲುಗಳಲ್ಲಿ ಮೊಬೈಲ್ ಚಾರ್ಜ್ ಮಾಡುವ ಸೌಲಭ್ಯ ನಿಲ್ಲಿಸುವ ನಿರ್ಧಾರವು ಮುನ್ನೆಚ್ಚರಿಕೆ ಕ್ರಮವಾಗಿದೆ. ಮೊಬೈಲ್ ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ಬಳಸುವ ಪಾಯಿಂಟ್ಗಳನ್ನು ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಸ್ವಿಚ್ ಆಫ್ ಮಾಡಲಾಗುತ್ತದೆ ಎಂದು ರೈಲ್ವೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇತ್ತೀಚೆಗೆ ಮಾರ್ಚ್ 13ರಂದು ಶಾರ್ಟ್ ಸರ್ಕ್ಯೂಟ್ ಶಂಕಿತ ಪ್ರಕರಣವೊಂದರಲ್ಲಿ ಡೆಹ್ರಾಡೂನ್‌ನಿಂದ ಹೊರಟ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದಾದ ಕೇವಲ ಆರು ದಿನಗಳ ಬಳಿಕ ರಾಂಚಿ ನಿಲ್ದಾಣದಲ್ಲಿ ಸರಕು ರೈಲಿನ ಎಂಜಿನ್‌ನಲ್ಲೂ ಇದೇ ರೀತಿಯ ಘಟನೆ ವರದಿಯಾಗಿತ್ತು.
ಇದನ್ನೂ ಓದಿ: ಏಪ್ರಿಲ್ 1ರಿಂದ ನ್ಯೂ ಅಕೌಂಟಿಂಗ್ ರೂಲ್ಸ್.. GST ವಂಚನೆ, ಆಡಿಟ್ ರೆಕಾರ್ಡ್ ತಿದ್ದುಪಡಿ ಮಾಡಿದ್ರೆ ಹುಷಾರ್!
ಸುರಕ್ಷತೆಯು ರೈಲ್ವೆ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿದೆ. ರೈಲುಗಳ ಚಾಲನೆಯಲ್ಲಿನ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಸಚಿವರು 'ಸುರಕ್ಷತಾ ಕ್ರಮಗಳು ಕುರಿತು ಪರಿಶೀಲನಾ ಸಭೆಯಲ್ಲಿ ಸೂಚಿಸಿದ್ದಾರೆ ಎಂಬುದು ಪ್ರಕಟಣೆಯಿಂದ ತಿಳಿದುಬಂದಿದೆ.
ಭಾರತೀಯ ರೈಲ್ವೆ ಧೂಮಪಾನ ಮತ್ತು ಅಗ್ನಿಗೆ ಕಾರಣವಾಗುವ ವಸ್ತುಗಳನ್ನು ಸಾಗಿಸುವುದರ ವಿರುದ್ಧ ಹಲವು ಶಿಸ್ತಿನ ಉಪಕ್ರಮಗಳನ್ನು ಶಿಫಾರಸು ಮಾಡಿದೆ. ಇದು ಇತ್ತೀಚಿನ ಕೆಲವು ಆನ್‌ಬೋರ್ಡ್ ರೈಲುಗಳ ಬೆಂಕಿಯ ಅವಘಡಗಳು ಸಂಭವಿಸಿದ ಬಳಿಕ ಜಾರಿಗೆ ಬರುತ್ತಿದೆ.