ನವದೆಹಲಿ: ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಲೋಕಸಭೆಯಲ್ಲಿ ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಮೇಲೆ ವಾಗ್ದಾಳಿ ನಡೆಸಿದ್ದು, ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುತ್ತಿತ್ತು ಎಂದು ವ್ಯಂಗ್ಯವಾಡಿದರು.
ರೈಲ್ವೆ ಸಚಿವಾಲಯದ ಅನುದಾನದ ಬೇಡಿಕೆಗಳ ಕುರಿತ ಚರ್ಚೆಯ ವೇಳೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರತ್ಯೇಕ ರೈಲ್ವೆ ಬಜೆಟ್ ಕೇವಲ ಬಲೂನ್ ಆಗಿತ್ತು. ಅದು ಸದನದಲ್ಲಿ ಚಪ್ಪಾಳೆಯನ್ನು ಮಾತ್ರ ಆಕರ್ಷಿಸುತ್ತಿತ್ತು. ಚುನಾವಣೆಗಳಲ್ಲಿ ಜನರನ್ನು ದಾರಿ ತಪ್ಪಿಸಲು ಬಳಸುವ ನಕಲಿ ಪ್ರಕಟಣೆಗಳಾಗಿದ್ದವು ಎಂದು ಹರಿಹಾಯ್ದರು.
ಈ ಕುರಿತಂತೆ ಕೆಲವು ಉದಾಹರಣೆಗಳನ್ನು ಉಲ್ಲೇಖಿಸಿದ ರೈಲ್ವೆ ಸಚಿವರು, 1974ರಿಂದ ಕೆಲವು ಯೋಜನೆಗಳು ಇನ್ನೂ ಬಾಕಿ ಉಳಿದಿವೆ. 2013-14ರಲ್ಲಿ 54,000 ಕೋಟಿ ರೂ. ಇದ್ದ ಅನುದಾನವನ್ನು ಈ ವರ್ಷಕ್ಕೆ 1.61 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದೇವೆ. 58 ಸೂಪರ್ ಕ್ರಿಟಿಕಲ್ ಮತ್ತು 68 ನಿರ್ಣಾಯಕ ಯೋಜನೆಗಳಿವೆ ಎಂದರು.
ನಾವು 6,000 ಕಿ.ಮೀ ರೈಲ್ವೆ ವಿದ್ಯುದ್ದೀಕರಣದ ಗುರಿ ನಿಗದಿಪಡಿಸಿದ್ದು, 2013-14ರಲ್ಲಿ ಇರಿಸಿಕೊಂಡಿದ್ದ 600-650 ಕಿ.ಮೀ ವಿದ್ಯುದ್ದೀಕರಣದ ಪ್ರತಿಯಾಗಿ ನಾವು 5,200 ಕಿ.ಮೀ ಗುರಿ ಈಡೇರಿಸಿದ್ದೇವೆ. ಈ ಹಿಂದಿನ ಸರ್ಕಾರದ ನಿಧಿಯನ್ನು ಬಲಪಡಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.