ನವದೆಹಲಿ : ರೈಲ್ವೆ ಬಜೆಟ್ 2020 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಖಾಸಗಿ ರೈಲುಗಳ ಬಗ್ಗೆ ಮಾತನಾಡುವ ಮೂಲಕ ಮತ್ತು ಮೆಟ್ರೋ ಶೈಲಿಯ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಬೆಂಗಳೂರು ಉಪನಗರ ರೈಲು (ಸಬ್ ಅರ್ಬನ್ ರೈಲು) ಯೋಜನೆಗೆ ಹೆಚ್ಚು ಒತ್ತು ನೀಡಿದೆ.
ಮುಂಬೈ ಮತ್ತು ಅಹಮದಾಬಾದ್ ನಡುವಿನ ಹೈಸ್ಪೀಡ್ ರೈಲುಗಳನ್ನು ಸಕ್ರಿಯವಾಗಿ ಮುಂದುವರಿಸಲಾಗುವುದು. ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ನಿಲ್ದಾಣಗಳು ಮತ್ತು ರೈಲುಗಳ ಪುನರಾಭಿವೃದ್ಧಿಯನ್ನು ಸರ್ಕಾರ ಕೈಗೊಳ್ಳಲಿದೆ. ಬೆಂಗಳೂರು ಮತ್ತು ಚೆನ್ನೈ ರೈಲು ಸಂಪರ್ಕಕ್ಕೆ ಯೋಜನೆ ನಡೆಯುತ್ತಿದೆ. ಬುಲೆಟ್ ರೈಲು ಯೋಜನೆ ಎಂದು ಕರೆಯಲ್ಪಡುವ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (ಎಂಎಹೆಚ್ಎಸ್ಆರ್) ಅನ್ನು 2023 ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ನಿರ್ಮಲಾ ಸೀತಾರಮಾನ್ ತಿಳಿಸಿದರು.
ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರದಿಂದ ಶೇ.20 ರಷ್ಟು ಅನುದಾನ ನೀಡಲಾಗುವುದು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಒಟ್ಟು 18,600 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಶೇ.20 ರಷ್ಟು ಅನುದಾನವನ್ನು ಅಂದರೆ 3700 ಕೋಟಿ ರೂಗಳನ್ನ ಕೇಂದ್ರ ಸರ್ಕಾರ ನೀಡಲಿದೆ. ಜತೆಗೆ ಶೇ.60 ರ ವರೆಗೆ ಬಾಹ್ಯ ನೆರವನ್ನು ಕೇಂದ್ರವೇ ನೀಡಲಿದೆ. ಚೆನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇ ಸಂಚಾರ ಮುಕ್ತವಾಗಲಿದೆ. 2023 ರೊಳಗೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಕಾಮಗಾರಿ ಪೂರ್ಣಗೊಳ್ಳಲಿದೆ. 3 - 4 ವರ್ಷಗಳಲ್ಲಿ 150 ಖಾಸಗಿ ರೈಲುಗಳನ್ನು ಓಡಿಸಲು ಉದ್ದೇಶಿಸಲಾಗಿದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಯಿತು.
ತೇಜಸ್ನಂತಹ ರೈಲುಗಳ ಸಂಖ್ಯೆಯಲ್ಲಿ ಹೆಚ್ಚಳ, ರೈಲ್ವೆ ಮಾಲೀಕತ್ವದ ನೆಲದ ಮೇಲಿರುವ ಟ್ರೈನ್ ಟ್ರ್ಯಾಕ್ಗಳಲ್ಲಿ ಸೌರ ವಿದ್ಯುತ್ ವ್ಯವಸ್ಥೆ, ಹಲವು ನಿಲ್ದಾಣಗಳ ಮರು ಅಭಿವೃದ್ಧಿ ಸೇರಿದಂತೆ ಇತ್ಯಾದಿ ಯೋಜನೆಗಳನ್ನು ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದರು.