ನವದೆಹಲಿ: ಆರ್ಥಿಕತೆಗೆ ಸಂಬಂಧಿಸಿದ ಮೈಕ್ರೋ ಎಕಾನಾಮಿಕ್ ದತ್ತಾಂಶ ಬಹಿರಂಗಪಡಿಸುವ ಬಗ್ಗೆ ಕೇಂದ್ರದ ವಿರುದ್ಧ ದೇಶ ಮತ್ತು ಹೊರದೇಶಗಳಿಂದ ತೀವ್ರವಾದ ಟೀಕೆಗಳು ಕೇಳಿ ಬರುತ್ತಿವೆ. ಈ ಮಧ್ಯೆ ಅಂಕಿಅಂಶ ಸಚಿವಾಲಯವು 'ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ (ಎನ್‌ಎಸ್‌ಒ) ಪ್ರಾಥಮಿಕ ಡೇಟಾವನ್ನು ಉಚಿತವಾಗಿ ನೀಡಲಿದೆ' ಎಂದು ತಿಳಿಸಿದೆ.
ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ರಾಜ್ಯ ಸಚಿವ ರಾವ್ ಇಂದ್ರಜಿತ್ ಸಿಂಗ್ ಲಿಖಿತ ಸ್ಪಷ್ಟನೆ ನೀಡಿ, ಸಚಿವಾಲಯ ಸಂಗ್ರಹಿಸುವ ಕ್ಯಾಲೆಂಡರ್ ವರ್ಷದ ಮುಂಗಡ ಸಂಖ್ಯಾಶಾಸ್ತ್ರೀಯ ದತ್ತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಸಂಗ್ರಹಿಸಿದ ಎಲ್ಲಾ ಪ್ರಾಥಮಿಕ ದತ್ತಾಂಶಗಳು 2019ರ ಏಪ್ರಿಲ್‌ನಿಂದ ಸಾರ್ವಜನಿಕರಿಗೆ ಮುಕ್ತವಾಗಿ ದೊರೆಯುವ ವ್ಯವಸ್ಥೆ ಕಲ್ಪಿಸಲಿದೆ ಎಂದಿದ್ದಾರೆ.
ಸಂಸದ ಶಶಿ ತರೂರ್ ಅವರು ಈ ಬಗ್ಗೆ ಪ್ರಶ್ನಿಸಿ, ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯೊಂದಿಗೆ (ಸಿಎಸ್‌ಒ) ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ) ವಿಲೀನಗೊಳಿಸಿ ಎನ್‌ಎಸ್‌ಒ ರಚಿಸುವುದು ಸಮಯೋಚಿತ ಬಿಡುಗಡೆಯ ಮೇಲೆ ಪರಿಣಾಮ ಬೀರುತ್ತದೆ. ಸಾರ್ವಜನಿಕ ಸಂಶೋಧನೆಗಾಗಿ ಅಂಕಿಅಂಶಗಳು ಮಹತ್ವದ್ದು ಎಂದು ಸಂಸತ್ನ ಗಮನ ಸೆಳೆದರು.
ಸಿಎಸ್ಒ ಮತ್ತು ಎನ್ಎಸ್ಎಸ್ಒಗಳನ್ನು ವಿಲೀನಗೊಳಿಸಿ ಎನ್ಎಸ್ಒ ರೂಪಿಸಿದ್ದು ಗುಣಮಟ್ಟದ ಅಂಕಿಅಂಶಗಳ ಬಗ್ಗೆ ಹೆಚ್ಚುತ್ತಿರುವ ಬೇಡಿಕೆಗಳನ್ನು ಸಮರ್ಪಕವಾಗಿ ಪೂರೈಸಲು ಎರಡೂ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿಸಲಿದೆ ಎಂದು ರಾವ್ ಸ್ಪಷ್ಟನೆ ನೀಡಿದರು.
ಸರ್ಕಾರವು 2016ರ ಮೇ ತಿಂಗಳಲ್ಲಿ ಯುನೈಟೆಡ್ ನೇಷನ್ಸ್ ಫಂಡಮೆಂಟಲ್ ಪ್ರಿನ್ಸಿಪಲ್ಸ್ ಆಫ್ ಅಫೀಶಿಯಲ್ ಸ್ಟ್ಯಾಟಿಸ್ಟಿಕ್ಸ್ (ಯುಎನ್‌ಎಫ್‌ಪಿಒಎಸ್)ಅನ್ನು ಜಾರಿಗೆ ತಂದಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತವಾದ ವೃತ್ತಿಪರ ಮತ್ತು ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾಗಿ ವಿಶ್ವಾಸಾರ್ಹ ಡೇಟಾ ಸಂಗ್ರಹಕ್ಕೆ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ವ್ಯವಸ್ಥೆಗೆ ಬಲ ತುಂಬಲಿದೆ ಎಂದು ಹೇಳಿದರು.