ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ ಹಾಗೂ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಗುರುವಾರ ಆಯೋಜಿಸುವ ವರ್ಚ್ಯುವಲ್ ಗ್ಲೋಬಲ್ ಇನ್ವೆಸ್ಟರ್ ರೌಂಡ್‌ಟೇಬಲ್ (ವಿಜಿಐಆರ್) ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ.
ಇದೊಂದು ಪ್ರಮುಖ ಜಾಗತಿಕ ಸಾಂಸ್ಥಿಕ ಹೂಡಿಕೆದಾರಿಕೆಯ ಸಮಾವೇಶವಾಗಿದೆ. ಭಾರತೀಯ ಉದ್ಯಮಿ ಮುಖಂಡರು, ಕೇಂದ್ರ ಸರ್ಕಾರದ ನೀತಿ ನಿರೂಪಕರು ಹಾಗೂ ಹಣಕಾಸು ಮಾರುಕಟ್ಟೆ ನಿಯಂತ್ರಕರ ನಡುವಿನ ಸಂವಾದ ನಡೆಯಲಿದೆ.
ಈ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.
ಜಾಗತಿಕ ಸಾಂಸ್ಥಿಕ ಹೂಡಿಕೆದಾರರ ಸಭೆಗೆ ಅಮೆರಿಕ, ಯುರೋಪ್, ಕೆನಡಾ, ಕೊರಿಯಾ, ಜಪಾನ್, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಸೇರಿದಂತೆ ಪ್ರಮುಖ ದೇಶಗಳ ಪ್ರತಿನಿಧಿಗಳು ಭಾಗವಹಿಸುವರು. ಇವುಗಳಲ್ಲಿ ಕೆಲವು ಸಿಂಗಾಪುರದ ತೆಮಾಸೆಕ್ ಹೋಲ್ಡಿಂಗ್ಸ್, ಕೆನಡಿಯನ್ ಇನ್ವೆಸ್ಟ್ಮೆಂಟ್ ಫಂಡ್, ಕೊರಿಯನ್ ಫಂಡ್ಸ್, ಜೆಬಿಐಸಿ, ಆಸ್ಟ್ರೇಲಿಯನ್ ಸೂಪರ್ನಂತಹ ಹಣಕಾಸು ಹೂಡಿಕೆದಾರರು ಪಾಲ್ಗೊಳ್ಳುವರು.
ಸಿಇಒ ಮತ್ತು ಸಿಐಒಗಳ ಕೂಡ ಭಾಗಿಯಾಗಲಿದ್ದು, ಈ ಹೂಡಿಕೆದಾರರಲ್ಲಿ ಕೆಲವರು ಮೊದಲ ಬಾರಿಗೆ ಭಾರತ ಸರ್ಕಾರದೊಂದಿಗೆ ತೊಡಗಿಸಿಕೊಳ್ಳಲ್ಲಿದ್ದಾರೆ. ಜಾಗತಿಕ ಹೂಡಿಕೆದಾರರ ಹೊರತಾಗಿಯೂ ಹಲವು ಉನ್ನತ ಉದ್ಯಮಿಗಳ ಪಾಲ್ಗೊಳ್ಳುವರು.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್, ರತನ್ ಟಾಟಾ, ಮುಖೇಶ್ ಅಂಬಾನಿ, ನಂದನ್ ನಿಲೇಕಣಿ, ದೀಪಕ್ ಪರೇಖ್, ಉದಯ್ ಕೊಟಕ್ ಮತ್ತು ದಿಲೀಪ್ ಸಂಘ್ವಿ ಅವರು ಸಹ ರೌಂಡ್‌ಟೇಬಲ್‌ನಲ್ಲಿ ಭಾಗವಹಿಸುವ ಪ್ರಮುಖ ಭಾರತೀಯ ಉದ್ಯಮಿಗಳಾಗಿದ್ದಾರೆ. ಹೂಡಿಕೆ ಮತ್ತು ಅವಕಾಶಗಳ ಬಗ್ಗೆ ಭಾರತೀಯ ದೃಷ್ಟಿಕೋನವನ್ನು ಒದಗಿಸಲಿದ್ದಾರೆ ಎಂದು ಹೇಳಿದರು.
ಭಾರತದ ಆರ್ಥಿಕ ಮತ್ತು ಹೂಡಿಕೆಯ ದೃಷ್ಟಿಕೋನ, ರಚನಾತ್ಮಕ ಸುಧಾರಣೆಗಳು ಹಾಗೂ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯ ಸರ್ಕಾರದ ದೃಷ್ಟಿಕೋನದ ಬಗ್ಗೆ ಚರ್ಚೆಗಳು ನಡೆಯಲಿವೆ.