ನವದೆಹಲಿ: ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮುಖ್ಯ ಭಾಷಣ ಮಾಡಲಿದ್ದು, ಈ ವೇಳೆ ಭಾರತ-ಅಮೆರಿಕ ಸಹಕಾರ ಮತ್ತು ಸಾಂಕ್ರಾಮಿಕದ ಬಳಿಕದ ಜಗತ್ತಿನಲ್ಲಿ ಉಭಯ ರಾಷ್ಟ್ರಗಳ ಸಂಬಂಧದ ಕುರಿತು ಚರ್ಚಿಸಲಿದ್ದಾರೆ.
ವರ್ಚುವಲ್ ಶೃಂಗಸಭೆಯನ್ನು ಅಮೆರಿಕ - ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಆಯೋಜಿಸುತ್ತಿದೆ. ಪರಿಷತ್ತು ರಚನೆಯ 45ನೇ ವರ್ಷಾಚರಣೆ ಇದಾಗಿದೆ. ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ 'ಉತ್ತಮ ಭವಿಷ್ಯ ನಿರ್ಮಿಸುವುದು' ಎಂಬ ವಿಷಯ ಕುರಿತು ಮೋದಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಶೃಂಗಸಭೆಯಲ್ಲಿ ಭಾರತೀಯ ಮತ್ತು ಅಮೆರಿಕ ಸರ್ಕಾರದ ನೀತಿ ನಿರೂಪಕರು, ರಾಜ್ಯಮಟ್ಟದ ಅಧಿಕಾರಿಗಳು ಮತ್ತು ವ್ಯಾಪಾರ ಹಾಗೂ ಸಮಾಜದ ಚಿಂತಕರು ಉಪಸ್ಥಿತಿ ಇರಲಿದ್ದಾರೆ ಎಂದು ಹೇಳಿದೆ.
ಶೃಂಗಸಭೆಯಲ್ಲಿ ಇತರ ಪ್ರಮುಖ ಭಾಷಣಕಾರರಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ವರ್ಜೀನಿಯಾದ ಸೆನೆಟರ್ ಮತ್ತು ಸೆನೆಟ್ ಇಂಡಿಯಾದ ಸಹ - ಅಧ್ಯಕ್ಷ ಕಾಕಸ್ ಮಾರ್ಕ್ ವಾರ್ನರ್, ವಿಶ್ವಸಂಸ್ಥೆಯ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಸೇರಿದಂತೆ ಇತರರು ಇರಲಿದ್ದಾರೆ.