ನವದೆಹಲಿ: ಲಾಕ್ಡೌನ್ನಿಂದ ಪ್ರಭಾವಿತವಾದ ಕ್ಷೇತ್ರಗಳಿಗೆ ಎರಡನೇ ಹಂತದ ಆರ್ಥಿಕ ಉತ್ತೇಜಕ ಪ್ಯಾಕೇಜ್ ಘೋಷಿಸಲು ಪ್ರಧಾನಿ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಸೇರಿದಂತೆ ಹಣಕಾಸು ಅಧಿಕಾರಿಗಳು ಇಂದು ಸರಣಿ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಸೀತಾರಾಮನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಪ್ರಮುಖ ಆರ್ಥಿಕ ಸಚಿವಾಲಯಗಳಾದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಮಂತ್ರಿಗಳೊಂದಿಗೆ ನಂತರ ಸಭೆ ನಡೆಸಿದ್ದರು ಎಂಬುದು ತಿಳಿದು ಬಂದಿದೆ.
ಮಾಸಿಕ ಜಿಎಎಸ್ಟಿ ಸಂಗ್ರಹ ಸಂಖ್ಯೆಯ ಬಿಡುಗಡೆ ಮುಂದೂಡಿದ ಹಣಕಾಸು ಸಚಿವಾಲಯ, ಪ್ರಸ್ತುತ ಆರ್ಥಿಕತೆಯ ಸ್ಥಿತಿ ಮತ್ತು ದೇಶಿ ಆರ್ಥಿಕತೆ ಉತ್ತೇಜಿಸಲು ಕೈಗೊಳ್ಳಬೇಕಾದ ಉಪಕ್ರಮಗಳ ಕುರಿತು ಪ್ರಧಾನಿಗಳ ಜೊತೆ ವಿವರವಾದ ಯೋಜನೆಗಳನ್ನು ನೀಡಲು ನಿರ್ಧರಿಸಲಾಗಿದೆ.
ಪ್ರಧಾನಿಗಳು ಈಗಾಗಲೇ ನಾಗರಿಕ ವಿಮಾನಯಾನ, ಕಾರ್ಮಿಕ ಮತ್ತು ವಿದ್ಯುತ್ ಸೇರಿದಂತೆ ವಿವಿಧ ಸಚಿವಾಲಯಗಳೊಂದಿಗೆ ಸಭೆ ನಡೆಸಿದ್ದಾರೆ. ದೇಶಿಯ ಮತ್ತು ಸಾಗರೋತ್ತರ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಸಣ್ಣ ಉದ್ಯಮಗಳ ಪುನರುಜ್ಜೀವನದತ್ತ ಗಮನಹರಿಸುವ ದೃಷ್ಟಿಯಿಂದ ಗುರುವಾರ ವಾಣಿಜ್ಯ ಮತ್ತು ಎಂಎಸ್‌ಎಂಇ ಸಚಿವಾಲಯಗಳ ಜತೆ ವಿವರವಾದ ಚರ್ಚೆ ನಡೆಸಿದರು. ಇದರಿಂದಾಗಿ ಚೇತರಿಕೆ ಪ್ರಕ್ರಿಯೆಯು ತ್ವರಿತಗೊಳ್ಳುತ್ತದೆ ಎಂಬ ವಿಶ್ವಾಸ ಮೂಡಿದೆ.