ಬೆಂಗಳೂರು: ಭಾರತದ ಗಣಿಗಾರಿಕೆ, ಸಾಫ್ಟ್ವೇರ್ ಮತ್ತು ಔಷಧೀಯ ಕ್ಷೇತ್ರಗಳ ಉದ್ಯಮಿಗಳಿಗೆ ಪೆರುವಿನಲ್ಲಿ ಬಂಡವಾಳ ಹೂಡುವಂತೆ ಪೆರು ದೇಶದ ರಾಯಭಾರಿ ಕಾರ್ಲೋಸ್ ಆರ್ ಪೊಲೊ ಆಹ್ವಾನಿಸಿದರು.
198ನೇ ಪೆರು ದಿನಾಚರಣೆಯ ಸ್ಮರಣಾರ್ಥ ಏರ್ಪಡಿಸಿದ್ದ ಜವಳಿ ವಸ್ತುಗಳ ಪ್ರದರ್ಶನ ಮತ್ತು ಪೆರು ಚಲನಚಿತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಪೆರು ಸುಂದರವಾದ ದೇಶ. ಇಲ್ಲಿ ಕೈಗಾರಿಕಾ ಕ್ಷೇತ್ರ ಉತ್ತಮವಾಗಿದ್ದು, ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವಿದೆ ಎಂದರು.
ಪೆರುವಿನಲ್ಲಿರುವ ಸಕಾರಾತ್ಮಕ ಹೂಡಿಕೆಯ ವಾತಾವರಣ ಮತ್ತು ಭಾರತೀಯ ಕಂಪನಿಗಳಿಗೆ ಇರುವ ಅವಕಾಶಗಳ ಬಗ್ಗೆ ಉಲ್ಲೇಖಿಸಿದ ಪೊಲೊ ಅವರು, ಬಂಡವಾಳ ಹೂಡಿಕೆಯ ಮಾತುಕತೆಗೆ ದೆಹಲಿಯಲ್ಲಿರುವ ತಮ್ಮ ಕಚೇರಿ ಸದಾ ತೆರದಿರುತ್ತದೆ. ಭಾರತ ಒಂದು ದೊಡ್ಡ ಮಾರುಕಟ್ಟೆ ರಾಷ್ಟ್ರ. ನಾವು ಹೆಚ್ಚು ಸಹಕರಿಸಲು, ಹೂಡಿಕೆಯತ್ತ ಗಮನಹರಿಸಲು ಮತ್ತು ಸಂಬಂಧಗಳನ್ನು ಸುಧಾರಿಸಲು ಬಯಸುತ್ತೇವೆ ಎಂದರು.
ಚೀನಾ ಮತ್ತು ಅಮೆರಿಕ ನಂತರ ಪೆರುವಿನಲ್ಲಿನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರಿಕೆ ರಾಷ್ಟ್ರ ಭಾರತವಾಗಿದೆ. ಇಲ್ಲಿನ ವ್ಯಾಪಾರ ಪ್ರಮಾಣವನ್ನು ಸುಧಾರಿಸಲು ಮತ್ತು ಪ್ರಥಮ ವ್ಯಾಪಾರ ಪಾಲುದಾರರಾಗುವ ಗುರಿಯನ್ನು ಹೊಂದಲು ನಾವು ಸಹಕರಿಸುತ್ತೇವೆ. ಅಲ್ಲದೇ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಬಹುತೇಕ ಎಲ್ಲ ಚಿನ್ನವನ್ನು ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಭಾರತವು ವಿಶ್ವದಲ್ಲೇ ಚಿನ್ನದ ಗ್ರಾಹಕರಲ್ಲಿ ಪ್ರಥಮ ಸ್ಥಾನದಲ್ಲಿದೆ. ಪೆರು ಮೂಲ ಮತ್ತು ಅಮೂಲ್ಯ ಲೋಹಗಳಿಗೆ ಹೆಸರುವಾಸಿಯಾಗಿದೆ ಮತ್ತು ಕರ್ನಾಟಕವು ಸೇರಿದಂತೆ ಗಣಿಗಾರಿಕೆ ಮತ್ತು ಐಟಿ ವ್ಯವಹಾರಗಳ ಹೂಡಿಕೆದಾರರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತಿದೆ ಎಂದು ಅವರು ಹೇಳಿದರು.