ನವದೆಹಲಿ: ವಿದ್ಯುತ್ ವಲಯದಲ್ಲಿನ ಪಾವತಿಯಾಗದ ಹಣದ ಮೊತ್ತ ಏರಿಕೆ ಆಗುವುದನ್ನು ನಿಯಂತ್ರಿಸಲು ವಿದ್ಯುತ್ ಬಿಲ್ನ ಮೊತ್ತ ಪಾವತಿಸದಿದ್ದರೇ ವಿದ್ಯುತ್ ಸಂಪರ್ಕ ಕಡಿಗೊಳಿಸುವ ಎಚ್ಚರಿಕೆಯನ್ನು ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ನೀಡಿದ್ದಾರೆ.
20ನೇ ಪಿಟಿಸಿ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ವಿದ್ಯುತ್ ಸೌಕರ್ಯಬೇಕಾದರೆ ಮೊದಲು ಹಣ ಪಾವತಿಸಿ ಬಳಿಕ ಸೇವೆ ಪಡೆಯಬೇಕು. ಆಯಾ ರಾಜ್ಯಗಳು ತಮ್ಮ ಸ್ವಂತ ಬಜೆಟ್ನಲ್ಲಿ ಉಚಿತ ವಿದ್ಯುತ್ ಸೇವೆಗಳನ್ನು ಒದಗಿಸಬಹುದು ಎಂದು ಹೇಳಿದ್ದಾರೆ.
ಬಂಡವಾಳದ ಹೂಡಿಕೆ ಇಲ್ಲದೇ ಉಚಿತ ವಿದ್ಯುತ್ ಕೊಡಲು ಸಾಧ್ಯವಿಲ್ಲ. ಇಲೆಕ್ಟ್ರಿಸಿಟಿ ಖರ್ಚನ್ನು ಬೇಡುವಂತಹದ್ದು. ಅದನ್ನು ಹಣಕೊಟ್ಟು ಪಡೆಯಬೇಕು ವಿನಃ ಉಚಿತವಾಗಿ ಪಡೆಯುವಂತದಲ್ಲ. ಪಾವತಿ ಆಗದ ವಿದ್ಯುತ್ ಬಿಲ್ಗಳಿಂದಾಗಿ ಈ ಕ್ಷೇತ್ರ ಒತ್ತಡಕ್ಕೆ ಒಳಗಾಗಿದೆ. ಅನೇಕ ರಾಜ್ಯಗಳಲ್ಲಿನ ಅಸ್ಥಿರತೆ ಮತ್ತು ತಕ್ಷಣದ ರಾಜಕೀಯ ಕಾರಣಗಳಿಂದ ಆಗಾಗ ಸಂಪರ್ಕ ಕಡಿತಗೊಳುತ್ತದೆ ಎಂದರು.
ಹಲವು ರಾಜ್ಯಗಳು ರಾಜಕೀಯ ಲಾಭಕ್ಕಾಗಿ ವಿದ್ಯುತ್ ಬಳಕೆಯ ಮೇಲೆ ಪಡೆಯಬೇಕಾದ ಹಣವನ್ನು ಸರಿಯಾಗಿ ಸಂಗ್ರಹಿಸುತ್ತಿಲ್ಲ. ಇಂತಹ ಸಮಸ್ಯೆಗಳ ವಿರುದ್ಧ ಕೇಂದ್ರ ಸರ್ಕಾರ ಕೂಡ ಸ್ಥಿರವಾದ ನಿರ್ಧಾರವನ್ನು ಇದುವರೆಗೂ ತೆಗೆದುಕೊಂಡಿಲ್ಲ. ವಿದ್ಯುತ್ ಸರಬರಾಜು ಹಾಗೂ ಪಾವತಿ ನಡುವೆ ಸಾಕಷ್ಟು ಅಂತರವಿದೆ ಎಂದು ಸಿಂಗ್ ಆರೋಪಿಸಿದ್ದಾರೆ.