ನವದೆಹಲಿ: ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿ (ಎನ್ಎಲ್ಇಎಂ) ಜಾರಿಯಾದ ಬಳಿಕ ಇಲ್ಲಿಯವರೆಗೂ ರೋಗಿಗಳ 12,447 ಕೋಟಿಯಷ್ಟು ಹಣ ಉಳಿತಾಯವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯನ್ನು (ಎನ್ಎಲ್ಇಎಂ) ಕಾಯ್ದೆಯನ್ನು 2011ರಂದು ಜಾರಿಗೆ ತರಲಾಯಿತು. 2013ರ ಮೇ ತಿಂಗಳಿಂದ 2016ರ ಫೆಬ್ರವರಿ ವರೆಗೆ ರೋಗಿಗಳ ₹ 2,422 ಕೋಟಿಯಷ್ಟು ಉಳಿತಾಯವಾಗಿದೆ. 2016ರ ಮಾರ್ಚ್ನಿಂದ ಇಲ್ಲಿಯ ವರೆಗೆ ₹ 2,644 ಕೋಟಿ ರೋಗಿಗಳ ಜೇಬಿಂದ ಖರ್ಚಾಗುವುದು ತಪ್ಪಿದೆ ಎಂದು ಮಾಹಿತಿ ನೀಡಿದ್ದಾರೆ.
ಹೃದಯ ರೋಗ ಹಾಗೂ ಮಧುಮೇಹ ಸಂಬಂಧಿತ ಕಾಯಿಲೆಗಳಿಗೆ ಸೇವಿಸುತ್ತಿದ್ದ ಔಷಧಗಳಿಂದ ₹ 350 ಕೋಟಿ ಉಳಿತಾಯ ಆಗಿದೆ. ಕಾರ್ಡಿಯಾಕ್ ಸ್ಟೆಂಟ್ಗಳ ಮತ್ತು ಮೊಣಕಾಲು ಇಂಪ್ಲಾಂಟ್‌ಗಳ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದ್ದರಿಂದ ರೋಗಿಗಳು ಕ್ರಮವಾಗಿ ₹ 4,547 ಕೋಟಿ ಮತ್ತು ₹ 1,500 ಕೋಟಿ ಉಳಿಸಿದ್ದಾರೆ. ಕ್ಯಾನ್ಸರ್ ಔಷಧಗಳ ಉಳಿತಾಯದ ಮೊತ್ತ ಕೂಡ ₹ 984 ಕೋಟಿಯಷ್ಟಿದೆ ಎಂದರು.
ಔಷಧ ಬೆಲೆ ನಿಯಂತ್ರಣ ಆದೇಶ ಕಾಯ್ದೆಯಡಿ (ಡಿಪಿಸಿಒ) ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (ಎನ್‌ಪಿಪಿಎ) ಹೃದಯ ರೋಗ, ಕ್ಯಾನ್ಸರ್, ಚರ್ಮ ವ್ಯಾಧಿಗಳನ್ನು ಗುಣಪಡಿಸುವ ಹಾಗೂ ವಿವಿಧ ಬಗೆಯ ಔಷಧಗಳ ಬೆಲೆ ಕಡಿಮೆ ಮಾಡಿದ ನಡೆಯನ್ನು ಸದಾನಂದಗೌಡ ಶ್ಲಾಘಿಸಿದರು.
ಎನ್‌ಪಿಪಿಎ ಆರಂಭವಾದಾಗಿನಿಂದ ಮೇ 2019ರವರೆಗೆ ನಿಗದಿಗಿಂತ ಹೆಚ್ಚುವರಿ ಮೊತ್ತಕ್ಕೆ ಔಷಧ ಮಾರಾಟ ಮಾಡಿದವರ ವಿರುದ್ಧ 2,033 ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಹೇಳಿದರು.