ನವದೆಹಲಿ : ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಅನಿವಾರ್ಯತೆ ಪೂರೈಸಲು ಸಂಸದರು ಮತ್ತು ಸಚಿವರ ವೇತನವನ್ನು ಒಂದು ವರ್ಷದವರೆಗೆ ಶೇ.30ರಷ್ಟು ಕಡಿಮೆ ಮಾಡುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು.
ಸಂಸತ್ತಿನ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ- 2020 ಸೋಮವಾರ ಲೋಕಸಭೆಯಲ್ಲಿ ಪರಿಚಯಿಸಿ, ಮಂಗಳವಾರ ಅದನ್ನು ಅಂಗೀಕರಿಸಲಾಯಿತು. ಹೊಸ ಮಸೂದೆಯು ಸಂಸತ್ತಿನ ಸದಸ್ಯರ ಸಂಬಳ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಅಧಿನಿಯಮ-2020 ಬದಲಾಯಿಸಲಾಗಿದೆ.
ಪ್ರಧಾನ ಮಂತ್ರಿ ಸೇರಿದಂತೆ ಸಚಿವರ ವೇತನ ಕಡಿಮೆ ಮಾಡುವ 2020ರ ಮಂತ್ರಿಗಳ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ ಇಂದು ಮೇಲ್ಮನೆಯಲ್ಲಿ ಮಂಡಿಸಲಾಯಿತು. ಸಂಸತ್ತಿನ ಸದಸ್ಯರ ಸಂಬಳ, ಭತ್ಯೆ ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ-2020 ಮತ್ತು ಮಂತ್ರಿಗಳ ವೇತನ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ- 2020 ಎಂಬ ಎರಡು ಮಸೂದೆಗಳನ್ನು ಒಟ್ಟಿಗೆ ಚರ್ಚೆಗೆ ತೆಗೆದುಕೊಳ್ಳಲಾಯಿತು.
ಗೃಹ ಸಚಿವ ಜಿ. ಕಿಶನ್ ರೆಡ್ಡಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಪ್ರತ್ಯೇಕವಾಗಿ ಮಸೂದೆ ಮಂಡಿಸಿದರು. ಮೇಲ್ಮನೆಯಲ್ಲಿ ಎರಡೂ ಕಾನೂನುಗಳನ್ನು ಜಾರಿಗೆ ತರಲಾಯಿತು. ಎರಡೂ ಮಸೂದೆಗಳನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.
ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್, ಬಹುಪಾಲು ಸಂಸದರು ತಮ್ಮ ವೇತನದ ಮೇಲೆ ಮಾತ್ರ ಅವಲಂಬಿತರಾಗಿದ್ದರೂ ಸಂಬಳ ಕಡಿತ ತೆಗೆದುಕೊಳ್ಳಲು ಸಿದ್ಧರಿರುವುದು ಮನ್ನಣೆಗೆ ಯೋಗ್ಯವಾಗಿದೆ ಎಂದರು. ಈ ಮಸೂದೆಗಳೊಂದಿಗೆ ಸಂಸದರ ಸಂಬಳ ಒಂದು ವರ್ಷಕ್ಕೆ ಶೇ.30ರಷ್ಟು 1,00,000 ರೂ.ಗಳಿಂದ 70,000 ರೂ.ಗೆ ಇಳಿಕೆಯಾಗುತ್ತದೆ.