ಇಸ್ಲಾಮಾಬಾದ್ : ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF)ಯ ನಿರ್ಧಾರ ಮರ್ಮಾಘಾತ ನೀಡಿದೆ. ಐಎಂಎಫ್ ಪಾಕಿಸ್ತಾನಕ್ಕೆ 6 ಬಿಲಿಯನ್ ಡಾಲರ್ ಸಾಲ ನೀಡಲು ಹಿಂದೇಟು ಹಾಕಿದೆ.
6 ಬಿಲಿಯನ್ ಡಾಲರ್ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಆರನೇ ಪರಿಶೀಲನೆಯನ್ನು ಪೂರ್ಣಗೊಳಿಸಲು ಪಾಕಿಸ್ತಾನದ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಆರ್ಥಿಕ ಮತ್ತು ಹಣಕಾಸು ನೀತಿಗಳ ಜ್ಞಾಪಕ ಪತ್ರವನ್ನು (MEFP) ಅಂತಿಮಗೊಳಿಸಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆರ್ಥಿಕವಾಗಿ ಚೇತರಿಸಿಕೊಳ್ಳಲು ತನಗೆ 6 ಬಿಲಿಯನ್ ಡಾಲರ್ ಅವಶ್ಯಕತೆ ಇದೆ ಎಂದು ಪಾಕಿಸ್ತಾನ ಕೋರಿತ್ತು. ಕೊನೆಯ ಪಕ್ಷ ಮೊದಲ ಕಂತಿನಲ್ಲಿ ಒಂದು ಬಿಲಿಯನ್ ಡಾಲರ್ ನೀಡಿ ಎಂದು ಹೇಳಿತ್ತು. ಆದರೆ, ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ಐಎಂಎಫ್ ಮತ್ತು ಪಾಕ್ ಹಣಕಾಸು ಸಚಿವರ ಮಾತುಕತೆ ವಿಫಲವಾಗಿದೆ.
ಕಳೆದ 4 ತಿಂಗಳ ಹಿಂದೆ ಪಾಕಿಸ್ತಾನ ಮತ್ತು ಐಎಂಎಫ್ ನಡುವೆ ಸಭೆ ನಡೆದಿತ್ತು. ಆಗಲೂ ಸಹ ಈ ಕುರಿತು ಮಾತುಕತೆ ವಿಫಲವಾಗಿತ್ತು. ಮೊದಲ ಬಾರಿಗೆ ಜೂನ್ನಲ್ಲಿ ಸಭೆ ನಡೆಸಲಾಗಿತ್ತು. ವಿದೇಶಿ ಸಾಲ ಹೊಂದಿರುವ ಪ್ರಮುಖ 10 ದೇಶಗಳಲ್ಲಿ ಪಾಕಿಸ್ತಾನ ಸಹ ಒಂದಾಗಿದೆ.
ಕಳೆದ ಎರಡು ವಾರಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ವಿದೇಶಿ ಕರೆನ್ಸಿ ಮೀಸಲು 1.6 ಶತಕೋಟಿ ಡಾಲರ್ ಕಡಿಮೆಯಾಗಿದೆ. ಯಾಕೆಂದರೆ, ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ಸುಕುಕ್ ಬಾಂಡ್‌ನ ಮುಕ್ತಾಯದ ಮೇಲೆ 1 ಬಿಲಿಯನ್ ಡಾಲರ್ ಪಾವತಿಸಿದೆ.
ಮತ್ತೊಂದೆಡೆ, ಪಾಕಿಸ್ತಾನದಲ್ಲಿ ಹಣದುಬ್ಬರ ಏರುತ್ತಿದೆ. ಈ ವಾರ, ಸಂವೇದನಾಶೀಲ ಬೆಲೆ ಸೂಚ್ಯಂಕವು (SPI) ಕಳೆದ ವಾರಕ್ಕೆ ಹೋಲಿಸಿದರೆ ಕಳೆದ ಒಂದು ವಾರದ ಅವಧಿಯಲ್ಲಿ ಶೇ.1.4ರಷ್ಟು ಹೆಚ್ಚಳವಾಗಿರುವುದರಿಂದ ಈ ವಾರ ಶೇ.14.5ರಷ್ಟಿದೆ.
ಪಾಕಿಸ್ತಾನ್ ಆಯಿಲ್‌ಫೀಲ್ಡ್ಸ್ ಲಿಮಿಟೆಡ್ (ಪಿಒಎಲ್) ಮತ್ತು ವಿದ್ಯುತ್ ದರಗಳು ಹಾಗೂ ಡಾಲರ್ ಎದುರು ರೂಪಾಯಿ ಅಪಮೌಲ್ಯೀಕರಣವು ಒಂದು ವಾರದ ಅವಧಿಯಲ್ಲಿ ಎಸ್‌ಪಿಐ ಶೇ 1.4ರಷ್ಟು ಹೆಚ್ಚಾಗಿದೆ ಎಂದು ಜಿಯೋ ನ್ಯೂಸ್ ಹೇಳಿದೆ.
ಹೀಗಾಗಿ, ಪಾಕಿಸ್ತಾನದ ಅರ್ಥ ವ್ಯವಸ್ಥೆ ನೆಲಕಚ್ಚಿದ್ದು, ಚೇತರಿಕೆ ಕಾಣುತ್ತಿಲ್ಲ. ಪಾಕ್ ಆರ್ಥಿಕ ವ್ಯವಸ್ಥೆ ವಿನಾಶದ ಅಂಚಿನತ್ತ ಸಾಗುತ್ತಿದೆ. ಸಾಲಕ್ಕೆ ಸೌದಿ ಅರೇಬಿಯಾದ ನಂತರ ಚೀನಾ ಕೂಡ ಖಾತರಿ ನೀಡುತ್ತಿಲ್ಲ ಎಂದು ಐಎಂಎಫ್ ಹೇಳಿಕೆ ಬಿಡುಗಡೆ ಮಾಡಿದೆ.
ಓದಿ: ಒಂದೇ ದಿನ 14 ಸಾವಿರ ಕೋಟಿ ಮೌಲ್ಯದ ವಸ್ತುಗಳನ್ನು ಮಾರಿದ Salesman!