ಅಹಮದಾಬಾದ್: ನಕಾರಾತ್ಮಕತೆಯನ್ನು ಬಿತ್ತರಿಸುತ್ತಿರುವ ವಿರೋಧಿಗಳು 60 ವರ್ಷಗಳಷ್ಟು ಕಾಲ ದೇಶ ಆಳಿದ್ದರೂ ಉದ್ಯೋಗ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಆಗಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ಹೆಸರಿಸದೆ ಹರಿಹಾಯ್ದರು.
ಪ್ರತಿಪಕ್ಷಗಳು ನಕಾರಾತ್ಮಕತೆಯನ್ನು ಹೆಚ್ಚಾಗಿ ಹರಡುತ್ತಿವೆ. 50-60 ವರ್ಷಗಳ ಆಳ್ವಿಕೆಯಲ್ಲಿ ನಿರುದ್ಯೋಗವನ್ನು ಎದುರಿಸಲು ಯಾವುದೇ ಹೊಸ ಪರಿಹಾರ ಕಂಡುಕೊಂಡಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಈ ಹಿಂದಿನ ಆರ್ಥಿಕತೆಯನ್ನು ದ್ವಿಗುಣಗೊಳಿಸಿ 5 ಬಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿ ಇರಿಸಿಕೊಂಡಿದ್ದೇವೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದಲ್ಲಿ ನಕಾರಾತ್ಮಕ ವಿಷಯಗಳನ್ನೇ ಹೇಳುವವರು ಯಾವಾಗಲೂ ನಿರುದ್ಯೋಗದ ಬಗ್ಗೆ ಮಾತನಾಡುತ್ತಾರೆ. ಅವರು ನಿರುದ್ಯೋಗದ ಕುರಿತು ಮಾತನಾಡುವಾಗಲೆಲ್ಲ ಯಾವಾಗಲೂ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಬರುತ್ತದೆ. ನೀವು 50-60 ವರ್ಷಗಳ ಕಾಲ ಈ ದೇಶವನ್ನು ಆಳಿದ್ದೀರಿ. ಈ ದೇಶದ ನಿರುದ್ಯೋಗ ಸಮಸ್ಯೆಗೆ ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ಎಂದು ಕೇಳಿದರು.
ನಾನು ಅವರೆಲ್ಲರಿಗೂ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. 130 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ದೇಶದ ಯುವಕರಿಗೆ ಉದ್ಯೋಗವನ್ನು ಒದಗಿಸಲು ನಿಮ್ಮ 50-60 ವರ್ಷಗಳ ಆಳ್ವಿಕೆಯಲ್ಲಿ ಕಂಡುಕೊಂಡು ಹೊಸ ಪರಿಹಾರವೇನು? ನೀವು ಏನನ್ನೂ ಹೊಸದಾಗಿ ಮಾಡಲಿಲ್ಲ. ಈಗ ನಮ್ಮಿಂದ ಉತ್ತರಗಳನ್ನು ಹುಡುಕುತ್ತಿದ್ದೀರಿ ( ಹಿಸಾಬ್ ಮಾಂಗ್ ರಹೇ ಹೈನ್?) ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಹೆಸರಿಸದೆ ಶಾ ಪ್ರಶ್ನಿಸಿದರು.
ಸುದೀರ್ಘ ಆಡಳಿತದ ಅವಧಿಯಲ್ಲಿ ಅವರು ಏನು ಮಾಡಿದ್ದರು? ಸ್ವಾತಂತ್ರ್ಯ ನಂತರದ 70 ವರ್ಷಗಳಲ್ಲಿ ಅವರು ದೇಶದ ಆರ್ಥಿಕತೆಯನ್ನು 2 ಟ್ರಿಲಿಯನ್ ಡಾಲರ್ಗೆ ತಲುಪಿಸಿದರು. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು 5 ವರ್ಷದಲ್ಲಿ 3 ಟ್ರಿಲಿಯನ್ಗೆ ತೆಗೆದುಕೊಂಡು ಹೋಗಿದೆ ಎಂದರು.