ನವದೆಹಲಿ: ಸರ್ಕಾರವು ತನ್ನ ವಿತ್ತೀಯ ಕೊರತೆ ಗುರಿಯನ್ನು ತಕ್ಷಣ ಪರಿಷ್ಕರಿಸುವುದಿಲ್ಲ ಮತ್ತು ಯಾವುದೇ ಖರ್ಚು ಕಡಿತದ ಕುರಿತು ಯೋಚಿಸುತ್ತಿಲ್ಲ ಎಂದು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಯದಲ್ಲಿ ನಾವು ಯಾವುದೇ ಗುರಿಯನ್ನು ಪರಿಷ್ಕರಿಸುತ್ತಿಲ್ಲ. ಈ ಬಗ್ಗೆ ನಂತರ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಖರ್ಚು ಕಡಿತಗೊಳಿಸುವ ಯಾವುದೇ ಯೋಜನೆ ಕೂಡ ನಮ್ಮ ಮುಂದೆ ಇಲ್ಲ ಎಂದರು.
ಸರ್ಕಾರದ ಅಂದಾಜಿನ ಪ್ರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ 1.45 ಟ್ರಿಲಿಯನ್ ರೂ. ( 20.4 ಬಿಲಿಯನ್ ಡಾಲರ್ ) ಆದಾಯ ಕಡಿತಗೊಳಿಸಲಿದೆ. ಆದರೆ, 2020/21ರ ಬಜೆಟ್‌ಗೆ ಹತ್ತಿರವಿರುವ ಹಣಕಾಸಿನ ಕೊರತೆಯ ಗುರಿಯನ್ನು ಮಾತ್ರ ಸರ್ಕಾರ ಪರಿಶೀಲಿಸುತ್ತದೆ ಎಂದು ಸೀತಾರಾಮನ್ ಹೇಳಿದರು.
ತಯಾರಕರನ್ನು ಸೆಳೆಯಲು, ಖಾಸಗಿ ಹೂಡಿಕೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಆರು ವರ್ಷಗಳ ಕನಿಷ್ಠ ಮಟ್ಟಕ್ಕಿಳಿದ ಬೆಳವಣಿಗೆ ದರವನ್ನು ವೃದ್ಧಿಸಲು ಕೇಂದ್ರ ಸರ್ಕಾರವು ಶುಕ್ರವಾರ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸಿತು. ಇದು ಉದ್ಯೋಗ ನಷ್ಟಕ್ಕೆ ಕಾರಣವಾಗಿದ್ದು, ಗ್ರಾಮಾಂತರ ಪ್ರದೇಶಗಳ ಜನರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.