ನವದೆಹಲಿ: ನಗದುರಹಿತ ವಹಿವಾಟಿನ ರುಪೇ ಡಿಬಿಟ್ ಕಾರ್ಡ್, ಭೀಮ್ ಆ್ಯಪ್ನ ಯುಪಿಐ, ಕ್ಯೂಆರ್ ಕೋಡ್ ಸೇರಿದಂತೆ ಇತರ ಡಿಜಿಟಲ್ ಹಣ ಪಾವತಿ ಸಂಬಂಧಿತ ಹೊಸ ನಿಯಮವು ಫೆಬ್ರವರಿ ತಿಂಗಳಿಂದ ವರ್ತಕರಿಗೆ ಅನ್ವಯವಾಗಲಿದೆ.
ಫೆಬ್ರವರಿಯಿಂದ 50 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟು ಹೊಂದಿರುವ ಎಲ್ಲ ವ್ಯವಹಾರಗಳು ರುಪೇ ಡೆಬಿಟ್ ಕ್ಯಾಡ್, ಭೀಮ್-ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್), ಭೀಮ್-ಯುಪಿಐ ಕ್ಯೂಆರ್ ಕೋಡ್ ಮತ್ತು ಯುಪಿಐ ಕ್ಯೂಆರ್ ಕೋಡ್ನಂತಹ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಈ ನಿಯಮ ಉಲ್ಲಂಘಿಸಿದರೇ ದಿನಕ್ಕೆ 5,000 ರೂ. ದಂಡ ವಿಧಿಸಲಾಗುತ್ತದೆ. ಈ ಎಲೆಕ್ಟ್ರಾನಿಕ್ ಸೇವೆಗಳ ಮೂಲಕ ಪಾವತಿ ಮಾಡುವವರು ಎಂಡಿಆರ್ (ಮರ್ಚೆಂಟ್ ಡಿಸ್ಕೌಂಟ್ ರೇಟ್) ಶುಲ್ಕ ಸೇರಿದಂತೆ ಇತರ ಯಾವುದೇ ಶುಲ್ಕ ಪಾವತಿಸುವಂತಿಲ್ಲ.
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕ್ಗಳ (ಪಿಎಸ್‌ಬಿ) ಮುಖ್ಯಸ್ಥರ, ಭಾರತೀಯ ಬ್ಯಾಂಕ್ಗಳ ಸಂಘಟನೆಗಳ ಮುಖಂಡರ ಹಾಗೂ ಖಾಸಗಿ ವಲಯದ ಬ್ಯಾಂಕ್ಗಳ ಪ್ರತಿನಿಧಿಗಳೊಂದಿಗೆ ಡಿಸೆಂಬರ್ 28ರಂದು ನಡೆಸಿದ್ದ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು. ಅಂದು ಗ್ರಾಹಕರು ಮತ್ತು ವ್ಯಾಪಾರಿಗಳು ಎಂಡಿಆರ್ ಶುಲ್ಕವನ್ನು ಕಡಿತಗೊಳಿಸುವ ಘೋಷಣೆ ಹೊರಡಿಸಲಾಗಿತ್ತು.
ಸೀತಾರಾಮನ್ ಅವರು ಕಳೆದ ವರ್ಷದ ತಮ್ಮ ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ಕಾಯ್ದೆಯಲ್ಲಿ (269 ಎಸ್‌ಯು) ಹೊಸ ವಿಭಾಗವನ್ನು ಸೇರಿಸಲು ಪ್ರಸ್ತಾಪಿಸಿದ್ದರು. ಇದರ ಅಡಿ ನಿಯಮ ಉಲ್ಲಂಘಿಸುವವರು ಗ್ರಾಹಕರಿಗೆ ಈ ಪಾವತಿ ಆಯ್ಕೆಗಳನ್ನು ನೀಡದಿದ್ದಕ್ಕೆ ಸೂಕ್ತ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
50 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವಹಿವಾಟು ಹೊಂದಿರುವವರು ನಗದು ಅಥವಾ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು ಅಥವಾ ಇ-ವ್ಯಾಲೆಟ್‌ಗಳಂತಹ ಡಿಜಿಟಲ್ ಪಾವತಿ ಮುಖಾಂತರ ಸ್ವೀಕರಿಸಬಹುದು. ಆದರೆ, ಜನರಿಗೆ ನಿಗದಿತ ಎಲೆಕ್ಟ್ರಾನಿಕ್ ಮೋಡ್ ಮೂಲಕ ಪಾವತಿಸುವ ಆಯ್ಕೆ ನೀಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.