ನವದೆಹಲಿ: ಗ್ರಾಹಕ ಸಂರಕ್ಷಣಾ ಕಾಯ್ದೆ- 2019, ಸೋಮವಾರದಿಂದ ಜಾರಿಗೆ ಬಂದಿದೆ. ಈ ನೂತನ ಕಾನೂನು ಗ್ರಾಹಕರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದರು.
ಈ ಕಾಯ್ದೆ ಗ್ರಾಹಕ ಸಂರಕ್ಷಣಾ ಮಂಡಳಿ, ಗ್ರಾಹಕ ವಿವಾದಗಳ ಪರಿಹಾರ ಆಯೋಗ, ಮಧ್ಯಸ್ಥಿಕೆ, ಉತ್ಪನ್ನದ ಹೊಣೆಗಾರಿಕೆ ಮತ್ತು ಮೋಸದ ವಸ್ತುಗಳನ್ನು ಹೊಂದಿರುವ ಉತ್ಪನ್ನಗಳ ತಯಾರಿಕೆ ಅಥವಾ ಮಾರಾಟದ ಶಿಕ್ಷೆಯಂತಹ ವಿವಿಧ ಅಧಿಸೂಚಿತ ನಿಯಮ ಮತ್ತು ನಿಬಂಧನೆಗಳ ಮೂಲಕ ಗ್ರಾಹಕರ ಹಕ್ಕುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ.
ಗ್ರಾಹಕರ ಹಕ್ಕುಗಳನ್ನು ಉತ್ತೇಜನೆ ಹಾಗೂ ರಕ್ಷಣೆ ಜೊತೆಗೆ ಕಾಯ್ದೆಯ ಅನುಷ್ಠಾನಗೊಳಿಸಲು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು (ಸಿಸಿಪಿಎ) ಸ್ಥಾಪಿಸುವುದು ಈ ಕಾಯ್ದೆಯಲ್ಲಿ ಸೇರಿದೆ ಎಂದರು.
ಗ್ರಾಹಕ ಹಕ್ಕುಗಳ ಉಲ್ಲಂಘನೆಯ ಬಗ್ಗೆ ದೂರುಗಳನ್ನು ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಸುರಕ್ಷಿತ ಸರಕು ಮತ್ತು ಸೇವೆಗಳನ್ನು ಮರುಪಡೆಯಲು ಆದೇಶಿಸಲಾಗುತ್ತದೆ. ಅನ್ಯಾಯದ ವ್ಯಾಪಾರದ ನಡೆಗಳು ಮತ್ತು ದಾರಿತಪ್ಪಿಸುವ ಜಾಹೀರಾತುಗಳಿಗೆ ಸಂಬಂಧಿಸಿದವರು ವಿರುದ್ಧ ದಂಡ ವಿಧಿಸಲು ಸಿಸಿಪಿಎಗೆ ಅಧಿಕಾರ ನೀಡಲಾಗಿದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಅನ್ಯಾಯದ ವ್ಯಾಪಾರದ ನಡೆಗಳನ್ನು ತಡೆಗಟ್ಟುವ ನಿಯಮಗಳನ್ನು ಸಹ ಈ ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ ಎಂದು ಪಾಸ್ವಾನ್ ಹೇಳಿದ್ದಾರೆ.
ಪ್ರತಿ ಇ-ಕಾಮರ್ಸ್ ಘಟಕವು ರಿಟರ್ನ್, ಮರುಪಾವತಿ, ವಿನಿಮಯ, ವಾರಂಟಿ ಮತ್ತು ಗ್ಯಾರಂಟಿ, ವಿತರಣೆ ಮತ್ತು ಸಾಗಣೆ, ಪಾವತಿ ವಿಧಾನ, ಕುಂದುಕೊರತೆ ಪರಿಹಾರ ಕಾರ್ಯವಿಧಾನ, ಪಾವತಿಗಳ ಸುರಕ್ಷತೆ ಮತ್ತು ಚಾರ್ಜ್-ಬ್ಯಾಕ್ ಆಯ್ಕೆಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸಲಾಗುತ್ತದೆ. ಉತ್ಪನ್ನ ತಯಾರಕರು, ಎಲೆಕ್ಟ್ರಾನಿಕ್ ಸೇವಾ ಪೂರೈಕೆದಾರರು, ದಾರಿತಪ್ಪಿಸುವ ಜಾಹೀರಾತುದಾರರನ್ನು ನಿಯಂತ್ರಿಸಲಿದೆ.
ತಯಾರಿಸಿದ ಉತ್ಪನ್ನಗಳ ಪರೀಕ್ಷೆಯನ್ನು ಖರೀದಿಸುವ ಮುನ್ನ, ಖರೀದಿಸುವ ವೇಳೆಯಲ್ಲಿ ಅಥವಾ ಬಳಿಕ ಅನೇಕ ಹಂತಗಳಲ್ಲಿ ಎಸಗಬಹುದಾದ ಮತ್ತು ಉತ್ಪನ್ನವು ಯಾವುದೇ ಮಟ್ಟದಲ್ಲಿ ದೋಷಪೂರಿತವಾಗಿದೆ ಎಂಬುದು ಕಂಡುಬಂದಲ್ಲಿ ಆ ಉತ್ಪನ್ನದ ಬ್ಯಾಚ್ ಅನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಗುತ್ತದೆ.
ಗ್ರಾಹಕ ರಹಕ್ಕುಗಳ ಪೋಷಣೆ, ರಕ್ಷಣೆ ಹಾಗೂ ಜಾರಿಗೊಳಿಸುವ ಉದ್ದೇಶದಿಂದ ಸಿಸಿಪಿಎ, ವ್ಯಾಪಾರದಿಂದ ಉಂಟಾಗುವ ವಿವಾದದಲ್ಲಿ ಗ್ರಾಹಕರ ಹಕ್ಕುಗಳನ್ನು ಕಾಪಾಡಲು ಮಧ್ಯಸ್ಥಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕ ಆಯೋಗಗಳ ಅಡಿಯಲ್ಲಿ ರಚಿಸಬೇಕಾದ ಮಧ್ಯಸ್ಥಿಕೆ ಸೆಲ್ಗಳಲ್ಲಿ ಮಧ್ಯಸ್ಥಿಕೆ ನಡೆಯಲಿದೆ. ಮಧ್ಯಸ್ಥಿಕೆಯ ಮೂಲಕ ಇತ್ಯರ್ಥದ ವಿರುದ್ಧ ಯಾವುದೇ ಮೇಲ್ಮನವಿ ಇರುವುದಿಲ್ಲ. ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ನಿಯಮಗಳ ಅನ್ವಯ, 5 ಲಕ್ಷ ರೂ. ತನಕ ಪ್ರಕರಣಗಳನ್ನು ದಾಖಲಿಸಲು ಯಾವುದೇ ಶುಲ್ಕ ಇರುವುದಿಲ್ಲ.