ಬೆಂಗಳೂರು: ಭಾರತ ತನ್ನ 34 ವರ್ಷಗಳ ಹಳೆಯ ಶಿಕ್ಷಣ ನೀತಿಗೆ ತಿಲಾಂಜಲಿ ಹೇಳಿ, 2020ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಾಗಿ (ಎನ್‌ಇಪಿ) ಬದಲಾಯಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಸುಧಾರಣೆಯನ್ನು ಬುಧವಾರ ಪರಿಚಯಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ನಿವೃತ್ತ ಮುಖ್ಯಸ್ಥ ಡಾ. ಕೆ ಕಸ್ತೂರಿ ರಂಗನ್ ನೇತೃತ್ವದ ತಜ್ಞರ ಸಮಿತಿಯು ಎನ್ಇಪಿ ಕರಡು ಸಿದ್ಧಪಡಿಸಿತ್ತು. ವಿದ್ಯಾರ್ಥಿಗಳಿಗೆ ಸರಿಯಾದ ಕೌಶಲ್ಯ ಒದಗಿಸಲು, ಜಾಗತಿಕ ಶೈಕ್ಷಣಿಕ ನಡುವಿನ ಅಂತರವನ್ನು ಕಡಿಮೆ ಮಾಡಲು, ಉನ್ನತ ಶಿಕ್ಷಣ ವ್ಯವಸ್ಥೆ ಪುನರುಜ್ಜೀವನಗೊಳಿಸಲು ಹಾಗೂ ಉದ್ಯಮದ ಬೇಡಿಕೆಗಳನ್ನು ಈಡೇರಿಸುವ ಗುರಿಗಳೊಂದಿಗೆ ನೂತನ ಶಿಕ್ಷಣ ನೀತಿಗಳನ್ನು ತಯಾರಿಸಲಾಗಿದೆ.
ಎನ್ಇಪಿ-2020, ಸಂಪೂರ್ಣ ಉನ್ನತ ಶಿಕ್ಷಣಕ್ಕಾಗಿ (ವೈದ್ಯಕೀಯ ಮತ್ತು ಕಾನೂನು ಹೊರತುಪಡಿಸಿ) ಭಾರತದ ಉನ್ನತ ಶಿಕ್ಷಣ ಆಯೋಗ ಸ್ಥಾಪಿಸಿ ಒಂದೇ ನಿಯಂತ್ರಕ ರಚಿಸಲು ಪ್ರಯತ್ನಿಸುತ್ತದೆ. ಇದು ಸಂಸ್ಥೆಗಳಿಗೆ ಶೈಕ್ಷಣಿಕ, ಆಡಳಿತ ಮತ್ತು ಆರ್ಥಿಕ ಸ್ವಾಯತ್ತತೆ ನೀಡಲು ನೆರವಾಗುತ್ತದೆ.
ಈ ನೀತಿ ರೂಪಿಸಿದ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಡಾ.ಎಂ.ಕೆ.ಶ್ರೀಧರ್ ಅವರು ಈಟಿವಿ ಭಾರತ ಜೊತೆಗೆ ಮಾತನಾಡಿ, ಹೊಸ ಶೈಕ್ಷಣಿಕ ನೀತಿಯನ್ನು ಇಡೀ ಕಲಿಕಾ ವಾಸ್ತುಶಿಲ್ಪವನ್ನು ಉದ್ಯಮದ ಅಗತ್ಯತೆಗಳನ್ನು ಸುಲಭವಾಗಿ ತಲುಪಿಸುವಂತೆ ವಿನ್ಯಾಸಗೊಳಿಸಿದ್ದೇವೆ ಎಂದು ಹೇಳಿದರು.
ನಮ್ಮ ಉದ್ಯಮವು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಬದಲಾವಣೆ ಇಲ್ಲಿ ಶಾಶ್ವತವಾಗಿದೆ. ದೇಶದಲ್ಲಿ ಈ ಬದಲಾವಣೆಯನ್ನು ಅನುಸರಿಸಲು ಶಿಕ್ಷಣ ವ್ಯವಸ್ಥೆಯು ಸ್ವಲ್ಪ ಮಟ್ಟಿಗೆ ನಿಧಾನವಾಗಿತ್ತು. ನೂತನ ಶಿಕ್ಷಣ ಅನುಷ್ಠಾನದಿಂದ ಉದ್ಯಮಗಳಿಗೆ ಬೇಕಾದ ಅಗತ್ಯ ಪ್ರವೃತ್ತಿಗಳನ್ನು ತ್ವರಿತಗತಿಯಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹೊಸ ನೀತಿಯು ವಿವಿಧ ಸಂಸ್ಥೆಗಳನ್ನು ಒಗ್ಗೂಡಿಸುತ್ತದೆ. ಯಾವುದೇ ನಿರ್ದಿಷ್ಟ ಉದ್ಯಮದ ಅಗತ್ಯಗಳನ್ನು ಮತ್ತು ಯಾವಾಗ ಅವು ಉದ್ಭವಿಸುತ್ತವೆ ಎಂಬುದನ್ನು ನಿರ್ದಿಷ್ಟವಾದ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲು ಅನುವು ಮಾಡಿಕೊಡುತ್ತದೆ ಎಂದರು.
ಉದ್ಯಮ ಮತ್ತು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಶಿಕ್ಷಣ ಸಂಸ್ಥೆಗಳಿಗೂ ಈ ನೀತಿಯು ಉಪಯುಕ್ತವಾಗಿದೆ. ಸಂಸ್ಥೆಗಳು ಸ್ವಾಯತ್ತತೆ ಪಡೆದ ನಂತರ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಸಮಾಜ ಮತ್ತು ವಿದ್ಯಾರ್ಥಿಗಳಿಂದ ಸಾಕಷ್ಟು ಬೆಂಬಲ ಪಡೆಯಲು ಪ್ರಾರಂಭಿಸಬೇಕು. ಅದರಿಂದ ಅವುಗಳ ಆರ್ಥಿಕ ಕಾರ್ಯಸಾಧ್ಯತೆ ಇನ್ನಷ್ಟು ವಿಸ್ತರಣೆ ಆಗುತ್ತದೆ ಎಂದು ಶ್ರೀಧರ್ ಹೇಳಿದರು.
ಹೊಸ ಶಿಕ್ಷಣ ನೀತಿಯನ್ನು ‘ಪರಿವರ್ತಕ’ ಎಂದು ಪರಿಗಣಿಸಲಾಗುತ್ತಿದೆ. ಓರ್ವ ಅಧ್ಯಯನ ಮಾಡಬಹುದಾದ ವಿಷಯಗಳ ಸಂಯೋಜನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ಕೃಷ್ಟತೆ ಒದಗಿಸುತ್ತದೆ. ಕಲೆ ಮತ್ತು ವಿಜ್ಞಾನಗಳ ನಡುವೆ ಯಾವುದೇ ಕಟ್ಟುನಿಟ್ಟಿನ ಪ್ರತ್ಯೇಕತೆ ಇರುವುದಿಲ್ಲ ಎಂದು ಸರ್ಕಾರ ತನ್ನ ಕರಡಿನಲ್ಲಿ ತಿಳಿಸಿದೆ.
ಆಯ್ಕೆಯೊಳಗೆ ಆಯ್ಕೆ (ಕೆಫೆಟೇರಿಯಾ) ವಿಧಾನವು ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚು ಅಗತ್ಯವಿರುವ ನಮ್ಯತೆ ತರುತ್ತದೆ. ಹೊಸ ಶಿಕ್ಷಣ ರಚನೆಯು ಅಂತಿಮವಾಗಿ ವಿದ್ಯಾರ್ಥಿಯ ಮೊದಲ ಕೆಲಸದ ಬಗ್ಗೆ ಮಾತ್ರ ಕಾಳಜಿ ವಹಿಸುವುದಿಲ್ಲ, ಅವನು / ಅವಳು ಉದ್ಯೋಗದ ಮುಂದಿನ ಬಗ್ಗೆಯೂ ಚಿಂತನೆಗೆ ಹಚ್ಚಲಿದೆ. ಕೆಫೆಟೇರಿಯಾ ವಿಧಾನವು ಮೂಲತಃ ನಾನಾ ಆಯ್ಕೆಗಳಿಂದ ಆಯ್ಕೆಗೆ ಅನುಮತಿಸುತ್ತದೆ ಎಂದು ವಿವರಿಸಿದರು.
ರಾಜ್ಯಗಳ ನೆರವಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಜಿಡಿಪಿ ಶೇ 6ಕ್ಕೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈಗಾಗಲೇ ಜಿಡಿಪಿಯಲ್ಲಿ ಸುಮಾರು ಶೇ 4.4ರಷ್ಟು ಖರ್ಚು ಮಾಡಲಾಗುತ್ತಿದೆ. ಇದನ್ನು ಶೇ 6ಕ್ಕೆ ತಲುಪಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಶ್ರೀಧರ್ ಹೇಳಿದರು.
ಭಾರತವನ್ನು 'ಜ್ಞಾನದ ಆರ್ಥಿಕತೆ'ಯನ್ನಾಗಿ ಮಾಡುವುದು ಹೊಸ ಶಿಕ್ಷಣ ನೀತಿಯ ದೀರ್ಘಕಾಲಿನ ಮಹತ್ವದ ಉದ್ದೇಶವಾಗಿದೆ. ಹೊಸ ಶಿಕ್ಷಣ ವ್ಯವಸ್ಥೆಯಿಂದ ಹೊರಬರುವ ಪ್ರತಿಭೆಗಳಿಂದ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕೌಶಲ್ಯದಿಂದ ಮಾತ್ರವಲ್ಲದೇ ಅವರ ವರ್ತನೆ, ಮೌಲ್ಯದ ವ್ಯವಸ್ಥೆ ಮತ್ತು ಸಾಮರ್ಥ್ಯದ ಮೂಲಕವೂ ದೇಶಕ್ಕೆ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.