ಅಹಮದಾಬಾದ್: ದೇಶದ ಪ್ರಥಮ ಬುಲೆಟ್ ಟ್ರೈನ್ ಮಹಾರಾಷ್ಟ್ರದ ಮುಂಬೈ-ಗುಜರಾತ್ನ ಅಹಮದಾಬಾದ್ ನಗರಗಳ ನಡುವೆ ಓಡಲಿದ್ದು, ಪ್ರಯಾಣಿಕ ಟಿಕೆಟ್ ದರ ₹ 3,000 ಇರಲಿದೆ ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಟೆಡ್ನ (ಎನ್ಎಚ್ಎಸ್ಆರ್ಸಿಎಲ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟು 1,380 ಹೆಕ್ಟೇರ್ ಪ್ರದೇಶದಲ್ಲಿ 237 ಕಿ.ಮೀ. ಉದ್ದ ಹಾದು ಹೋಗಲಿರುವ ಮುಂಬೈ- ಅಹಮದಾಬಾದ್ ಹೈ ಸ್ಪೀಡ್ ರೈಲ್ವೆ ಕಾರಿಡರನ್ನು ಸಾಮಾನ್ಯವಾಗಿ ಬುಲೆಟ್ ಟ್ರೈನ್ ಪ್ರಾಜೆಕ್ಟ್ ಎಂದು ಕರೆಯಲಾಗುತ್ತಿದೆ. ಯೋಜನೆಗೆ ಈಗಾಗಲೇ ಶೇ 45ರಷ್ಟು ಅಂದರೆ 622 ಹೆಕ್ಟೇರ್ ಜಮೀನು ವಶಪಡಿಸಿಕೊಳ್ಳಲಾಗದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2023ರ ಡಿಸೆಂಬರ್ ವೇಳೆಗೆ ಉದ್ದೇಶಿತ ಯೋಜನೆ ಪೂರ್ಣಗೊಳಿಸುವುದನ್ನು ಗಮನದಲ್ಲಿರಿಸಿಕೊಂಡು ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಯೋಜನೆ ಸಂಪೂರ್ಣವಾಗಿ ಪೂರ್ಣಗೊಂಡ ಬಳಿಕ ಬುಲೆಟ್ ಟ್ರೈನ್, ಏಕಮುಖ ಮಾರ್ಗದ 35 ಸಂಚಾರ ಸೇರಿ ದ್ವಿಮಾರ್ಗದಲ್ಲಿ 70 ಸಂಚಾರವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಓಡಾಡಲಿವೆ. ಪ್ರಯಾಣಿಕ ಟಿಕೆಟ್ ದರ ₹ 3,000 ಸಾವಿರ ಇರಲಿದೆ ಎಂದು ಎನ್ಎಚ್ಎಸ್ಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ತಿಳಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ಟಿಕೆಟ್ ದರ (ಏರ್ ಏಷ್ಯಾ) ₹ 3,530ರಿಂದ ಆರಂಭವಾಗುತ್ತದೆ. ಆದರೆ, ಮುಂಬೈ- ಅಹಮದಾಬಾದ್ ನಡುವಿನ ಟಿಕೆಟ್ ದರ ಇದಕ್ಕಿಂತ ಕಡಿಮೆಯಾಗಿದೆ.