ನವದೆಹಲಿ: ಮುಂಬರುವ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಸುಮಾರು 1,16,144 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಕರ್ನಾಟಕದಲ್ಲಿ ಸುಮಾರು 11,000 ಕೋಟಿ ರೂ. ವೆಚ್ಚದ 1200 ಕಿ.ಮೀ ಉದ್ದದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, 2019-21ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ 5.083 ಕೋಟಿ ರೂ.ವೆಚ್ಚದ 275 ಕಿ.ಮೀ.ನ 11 ರಸ್ತೆ ಯೋಜನೆಗಳಿಗೆ ಟೆಂಡರ್ ನೀಡಲಾಗಿದೆ ಎಂದರು.
ಕಳೆದ ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ 900 ಕಿ.ಮೀ.ಗಿಂತ ಹೆಚ್ಚಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗಳಿಗೆ ಸೇರಿಸಲಾಗಿದೆ. ಈಗ ರಾಜ್ಯದಲ್ಲಿ ಒಟ್ಟು 7,652 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇದೆ. 2,384 ಕಿ.ಮೀ ಉದ್ದದ 37,311 ಕೋಟಿ ರೂ. ವೆಚ್ಚದ ಒಟ್ಟು 71 ಕಾಮಗಾರಿಗಳು ನಡೆಯುತ್ತಿವೆ. ಇವುಗಳಲ್ಲಿ 12,286 ಕೋಟಿ ರೂ. ವೆಚ್ಚದ 1,127 ಕಿ.ಮೀ ಉದ್ದದ ಹೊಂದಿರುವ 26 ಕಾಮಗಾರಿಗಳಲ್ಲಿ ಶೇ 70ಕ್ಕಿಂತ ಹೆಚ್ಚಿನ ಕೆಲಸ ಮುಗಿದಿದೆ. 1,257 ಕಿ.ಮೀ ಉದ್ದದ 25,025 ಕೋಟಿ ರೂ. ವೆಚ್ಚದ 45 ಕಾಮಗಾರಿಗಳಲ್ಲಿ ಶೇ 70ರವರೆಗೆ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ವಿವರಿಸಿದರು.
ಮೋದಿ ಕನಸಿನ ಬುಲೆಟ್ ಟ್ರೈನ್ ಫೋಟೋ ರಿವೀಲ್ ಮಾಡಿದ ಜಪಾನ್!
ದೇಶದ ಅತಿದೊಡ್ಡ ಕಬ್ಬು ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಎಥೆನಾಲ್ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕಿದೆ. ದೇಶವು ಈಗಾಗಲೇ ಸಕ್ಕರೆ ಮತ್ತು ಅಕ್ಕಿಯನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತಿದೆ. ಸರ್ಕಾರದಲ್ಲಿ ಸಾಕಷ್ಟು ಸಂಗ್ರಹವಿದೆ. ಹೆಚ್ಚುವರಿ ಸಂಗ್ರಹವನ್ನು ಎಥೆನಾಲ್ ಆಗಿ ಪರಿವರ್ತಿಸಬಹುದು. ಇದನ್ನು ವಾಹನಗಳಿಗೆ ಪರ್ಯಾಯ ಇಂಧನವಾಗಿ ಬಳಸಬಹುದು. ಇದು ರೈತರ ಆದಾಯ ಸುಧಾರಿಸುವುದಲ್ಲದೇ, ದೇಶಕ್ಕೆ ಸ್ಥಳೀಯ ಇಂಧನಗಳ ಮೂಲವಾಗಲಿದೆ ಎಂದು ಗಡ್ಕರಿ ತಿಳಿಸಿದರು.