ಗುವಾಹಟಿ: ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಮುಂದಿನ ವಾರದಲ್ಲಿ ನೂತನ ಘೋಷಣೆಗಳು ಹೊರಬೀಳಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ತೆರಿಗೆ ಅಧಿಕಾರಿಗಳ, ವ್ಯಾಪಾರ ಮತ್ತು ಉದ್ಯಮಿದಾರೊಂದಿಗೆ ಸಂವಹನ ನಡೆಸುವ ಭಾಗವಾಗಿ ಗುವಾಹಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂಲಸೌಕರ್ಯಗಳಿಗೆ ಹಣ ವಿನಿಯೋಗಿಸುವುದು ಸರ್ಕಾರದ ಆದ್ಯತೆಯಾಗಿರಲಿದೆ ಎಂಬುದನ್ನು ಪುನರುಚ್ಚರಿಸಿದರು. ಸರ್ಕಾರದಿಂದ ಕೆಲವು ಸಾರ್ವಜನಿಕ ವೆಚ್ಚಗಳನ್ನು ಮುನ್ನೆಲೆಗೆ ತರಲಿದ್ದೇವೆ ಎಂದು ಭರವಸೆ ನೀಡಿದರು.
ಉದ್ಯಮಿ ವಲಯದ ವಿವಿಧ ಗುಂಪುಗಳು ಕೆಲವೊಂದು ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರ ನೇತೃತ್ವದ ಸರ್ಕಾರ ಮುಂದಿರಿಸಿದೆ. ಅವುಗಳಿಗೆ ಸೂಕ್ತ ಉತ್ತರ ನೀಡುವುದು ನಮ್ಮ ಜವಾಬ್ದಾರಿ. ಆಟೋಮೊಬೈಲ್ ಸೆಕ್ಟರ್ ಮತ್ತು ಹಣಕಾಸು ಸಂಸ್ಥೆಗಳ ಉತ್ತೇಜನೆಗೆ ತೆಗೆದುಕೊಂಡ ಈ ಹಿಂದಿನ ನಿರ್ಣಯಗಳು ಜಾರಿಗೆ ಬರಲಿವೆ ಎಂದು ಆಶ್ವಾಸನೆ ನೀಡಿದರು.