ನವದೆಹಲಿ: ಪುನರಾರಂಭಕ್ಕೂ ಮೊದಲು ಮರುಹೊಂದಿಸಲು ಕೊರೊನಾ ವೈರಸ್ ನಮಗೆ ಅವಕಾಶ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂ ಉದ್ದೇಶಿಸಿ ವಿಡಿಯೋ ಕಾನ್ಫೆರನ್ಸ್ ಮೂಲಕ ಮಾತನಾಡಿದ ಪ್ರಧಾನಿ, ಕೋವಿಡ್ ಬಳಿಕ ಸಮುದಾಯ ಕೂಟಗಳು, ಕ್ರೀಡಾ ಚಟುವಟಿಕೆಗಳು, ಶಿಕ್ಷಣ ಮತ್ತು ಮನರಂಜನೆಗಳಂತಹ ವಿಷಯಗಳು ಮೊದಲಿನಂತೆಯೇ ಇರುವುದಿಲ್ಲ. ಪುನರಾರಂಭ ಹೇಗೆ ಎಂಬ ದೊಡ್ಡ ಪ್ರಶ್ನೆ ಇಡೀ ಪ್ರಪಂಚದ ಮುಂದಿತ್ತು. ಪುನರಾರಂಭದ ಉತ್ತಮ ಅಂಶವೆಂದರೆ ನಗರ ಕೇಂದ್ರಗಳನ್ನು ಪುನಶ್ಚೇತನಗೊಳಿಸುವುದು ಎಂದರು.
ಲಾಕ್‌ಡೌನ್ ಬಗ್ಗೆ ಮಾತನಾಡಿದ ಮೋದಿ, ಲಾಕ್‌ಡೌನ್ ವಿಶ್ವದಾದ್ಯಂತ ಸಾಕಷ್ಟು ಪ್ರತಿರೋಧ ಎದುರಿಸಿತು. ಆದರೆ, ನಮ್ಮ ನಗರಗಳ ಬಿಲ್ಡಿಂಗ್ ಬ್ಲಾಕ್ ಕಾಂಕ್ರೀಟ್ ಆಗಿರದೆ ಸಮುದಾಯ ಕೇಂದ್ರೀತ ಆಗಿರುವುದರಿಂದ ಲಾಕ್‌ಡೌನ್ ನಿಯಮಗಳಿಗೆ ಬದ್ಧವಾಗಿವೆ. ಜನರು ಕೆಲಸಕ್ಕಾಗಿ ನಗರಗಳತ್ತ ವಲಸೆ ಹೋಗುತ್ತಾರೆ. ಆದರೆ ಈಗ ನಗರಗಳು ಜನರಿಗಾಗಿ ಕೆಲಸ ಮಾಡುವ ಸಮಯ ಇದಲ್ಲ ಎಂದು ಹೇಳಿದರು.
ನಾವು ಸುಸ್ಥಿರ ನಗರಗಳನ್ನು ನಿರ್ಮಿಸಲು ಸಾಧ್ಯವಿಲ್ಲವೇ? ನಗರಗಳ ಸೌಕರ್ಯಗಳನ್ನು ಹೊಂದಿರುವ ಆದರೆ, ಹಳ್ಳಿಗಳ ಮನೋಭಾವದ ನಗರ ಕೇಂದ್ರಗಳನ್ನು ನಿರ್ಮಿಸುವುದು ನಮ್ಮ ಪ್ರಯತ್ನವಾಗಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಕೆಲಸ ಮುಂದುವರಿಸಲು ತಂತ್ರಜ್ಞಾನ ನೆರವಾಗಿದೆ ಎಂದು ತಿಳಿಸಿದರು.