ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಕಡ್ಡಾಯವಾಗಿ ಹಾಲ್‌ಮಾರ್ಕಿಂಗ್ ಮಾಡುವ ಅವಧಿಯನ್ನು ಜೂನ್ 15ರವರೆಗೆ ಕೇಂದ್ರವು ವಿಸ್ತರಿಸಿದೆ.
ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
2021ರ ಜನವರಿ 15ರಿಂದ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಾಗುವುದು ಎಂದು 2019ರ ನವೆಂಬರ್‌ನಲ್ಲಿ ಸರ್ಕಾರ ಘೋಷಿಸಿತ್ತು. ಆದರೆ, ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಆಭರಣಕಾರರು ಹೆಚ್ಚಿನ ಸಮಯ ಕೋರಿದ ನಂತರ ಜೂನ್ 1ರವರೆಗೆ ನಾಲ್ಕು ತಿಂಗಳು ಗಡುವು ನೀಡಿತ್ತು. ಈಗ ಮತ್ತೆ ಅನುಷ್ಠಾನದ ಅವಧಿಯನ್ನು ಮುಂದೂಡಿಕೆ ಮಾಡಿದೆ.
ಗೋಲ್ಡ್ ಹಾಲ್‌ಮಾರ್ಕಿಂಗ್ ಅಮೂಲ್ಯವಾದ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. 'ಕೋವಿಡ್‌ನ ದೃಷ್ಟಿಯಿಂದ ಜ್ಯುವೆಲ್ಲರ್‌ಗಳಿಗೆ ಅನುಷ್ಠಾನಕ್ಕೆ ಸಜ್ಜಾಗಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಇನ್ನಷ್ಟು ಕಾಲಾವಕಾಶ ನೀಡುವ ವ್ಯಾಪರಿಗಳ ಮನವಿಯನ್ನು ಸರ್ಕಾರ ಪುರಸ್ಕರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಚಿನ್ನದ ಆಭರಣಗಳ ಹಾಲ್‌ಮಾರ್ಕಿಂಗ್ ಜೂನ್ 15ರಿಂದ ಪ್ರಾರಂಭವಾಗಲಿದೆ. ಈ ಮೊದಲು ಇದನ್ನು 2021ರ ಜೂನ್ 1ರಿಂದ ಜಾರಿಗೆ ತರಲಾಗುವುದು ಎಂದು ಹೇಳಲಾಗಿತ್ತು. ಸರಿಯಾದ ಸಮನ್ವಯ ಖಚಿತಪಡಿಸಿಕೊಳ್ಳಲು ಮತ್ತು ಅನುಷ್ಠಾನದ ಸಮಸ್ಯೆಗಳನ್ನು ಪರಿಹರಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮಹಾನಿರ್ದೇಶಕ ಪ್ರಮೋದ್ ತಿವಾರಿ ನೇತೃತ್ವದ ಸಮಿತಿ ರಚಿಸಲಾಗಿದೆ.
ಈ ಸಮಿತಿಯು ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ಮತ್ತು ಆಭರಣ ಸಂಘಗಳ ಪ್ರತಿನಿಧಿಗಳು, ವ್ಯಾಪಾರ ಮತ್ತು ಹಾಲ್‌ಮಾರ್ಕಿಂಗ್ ಸಂಸ್ಥೆಗಳನ್ನು ಒಳಗೊಂಡಿರುತ್ತದೆ.