ನವದೆಹಲಿ: ಜಮ್ಮು ಕಾಶ್ಮೀರ ಹಾಗೂ ಎಫ್ಎಟಿಎಫ್ ಸಭೆಯಲ್ಲಿ ಪಾಕಿಸ್ತಾನ ಪರವಾಗಿ ನಿಂತ ಟರ್ಕಿ ಮತ್ತು ಮಲೇಷ್ಯಾ ಭಾರತದ ಕೆಂಗಣ್ಣಿಗೆ ಗುರಿಯಾಗಿವೆ. ಎರಡೂ ರಾಷ್ಟ್ರಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತದ ತನ್ನ ಅಗಾಧ ಮಾರುಕಟ್ಟೆ ವಿಸ್ತರಣೆಯನ್ನು ಸಂಕುಚಿತಗೊಳಿಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ #ಬೈಕಾಟ್ಮಲೇಷ್ಯಾ (#boycottmalaysia) ಹ್ಯಾಷ್ಟ್ಯಾಗ್ ಹರಿದಾಡುತ್ತಿದೆ. ಇದರ ಜೊತೆಗೆ ವಿಶ್ವದಲ್ಲಿ ಅತಿ ಹೆಚ್ಚು ತಾಳೆ ಎಣ್ಣೆಯನ್ನು ಭಾರತ ಖರೀದಿಸುತ್ತಿದೆ. ಭಾರತೀಯ ವ್ಯಾಪಾರಿಗಳು ಮಲೇಷ್ಯಾದಿಂದ ತಾಳೆ ಎಣ್ಣೆ ಖರೀದಿಯನ್ನು ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಮಲೇಷ್ಯಾ ಭಾರತೀಯ ವ್ಯಾಪಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತೀಯ ಆಮದುದಾರರು ರಿಫೈನರ್‌ಗಳು ಪಾಮ್ ಆಯಿಲ್ ಖರೀದಿಯನ್ನು ಮಲೇಷ್ಯಾದಿಂದ ಇಂಡೋನೇಷ್ಯಾಕ್ಕೆ ಸ್ಥಳಾಂತರಿಸಿದ್ದಾರೆ ಎಂಬ ಉದ್ಯಮ ಪ್ರತಿನಿಧಿಗಳು ಉಲ್ಲೇಖಿಸಿದ ವರದಿಗಳು ಹೇಳುತ್ತಿವೆ.
ಭಾರತದ ವಾಣಿಜ್ಯ ನೀತಿಗೆ ಬೆಚ್ಚಿದ ಮಲೇಷ್ಯಾ ಪ್ರಧಾನಿ ಮಹತಿರ್ ಬಿನ್ ಮೊಹಮ್ಮದ್ ಭಾರತದ ಇಂತಹ ಕ್ರಮಕೈಗೊಂಡರೆ ಸಮಸ್ಯೆಗಳ ಪರಿಹಾರಕ್ಕೆ ರಾಜತಾಂತ್ರಿಕವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆದರೆ, ಭಾರತದಿಂದ ಈವರೆಗೂ ಯಾವುದೇ ಅಧಿಕೃತ ಮಾತುಗಳು ಹೊರಬಂದಿಲ್ಲ. ಸದ್ಯಕ್ಕೆ ಮೋದಿ ಸರ್ಕಾರ ಇದನ್ನು ಯಥಾವತ್ತಾಗಿ ಉಳಿಸಿಕೊಳ್ಳಲು ಯೋಜಿಸಿದ ಎಂದು ಹೇಳಲಾಗುತ್ತಿದೆ.
ನಾವು ಅಧಿಕೃತವಾಗಿ ಇನ್ನೂ ಏನನ್ನೂ ಸ್ವೀಕರಿಸಿಲ್ಲ. ಇದು ವ್ಯಾಪಾರಿಗಳ ಸಮುದಾಯದಿಂದ ಬಂದ ಪ್ರತಿಕ್ರಿಯೆ. ಅವರ ವೈಯಕ್ತಿಕ ನಿರ್ಧಾರಗಳಿಗೆ ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅಲ್ಲಿನ ಸರ್ಕಾರವು ಬಹಿಷ್ಕಾರ ಅಥವಾ ಬೇರೆ ಏನಾದರು ಆರಂಭಿಸಿದರೆ ನಾವು ರಾಜತಾಂತ್ರಿಕ ಮಾರ್ಗದ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಮಹತಿರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಟರ್ಕಿಯ ಡಿಫೆನ್ಸ್ ಕಂಪನಿ ವಿರುದ್ಧ ಭಾರತ ಈಗಾಗಲೇ ಕಠಿಣ ಕ್ರಮ ಕೈಗೊಂಡಿದ್ದು, ಎರಡು ಹಡಗುಗಳ ನಿರ್ಮಾಣಕ್ಕೆ ಅನಾಡೋಲ್ ಶಿಪ್ಯಾರ್ಡ್ನೊಂದಿಗಿನ ಒಪ್ಪಂದ ರದ್ದುಪಡಿಸಿದೆ. ಒಪ್ಪಂದ ರದ್ದಿಗೆ ಭಾರತ ಚಾಣಾಕ್ಷವಾಗಿ ಉತ್ತರ ನಿಡಿದ್ದು, ಅನಾಡೋಲ್ ಶಿಪ್ಯಾರ್ಡ್ ಪಾಕಿಸ್ತಾನಕ್ಕೂ ಹಡಗುಗಳು ನಿರ್ಮಿಸಿಕೊಡುತ್ತಿದೆ. ಹಾಗಾಗಿ ಭಾರತದ ಭದ್ರತೆಗೆ ಟರ್ಕಿ ಸಂಸ್ಥೆಯಿಂದ ಅಪಾಯ ಎದುರಾಗಲಿದೆ ಎಂದು ಹೇಳಿ ರಕ್ಷಣಾ ಸಚಿವಾಲಯ ಉತ್ತರಿಸಿದೆ.