ನವದೆಹಲಿ: ದೇಶದ ಆರ್ಥಿಕ ಹಿಂಜರಿತವು ಆಟೋಮೊಬೈಲ್ ಕ್ಷೇತ್ರವನ್ನು ಕಳೆದ 2 ದಶಕಗಳಲ್ಲೇ ಕಂಡುಕೇಳರಿಯದ ದುಸ್ಥಿತಿಗೆ ಕೊಂಡೊಯ್ದಿರುವ ವರದಿಗಳ ಬೆನ್ನಲ್ಲೇ ಆ ಕ್ಷೇತ್ರದಲ್ಲಿನ ವಹಿವಾಟು ತೀವ್ರವಾಗಿ ಕ್ಷೀಣಿಸಿರುವುದು ವರದಿಯಲ್ಲಿ ಬಹಿರಂಗವಾಗಿದೆ.
ಪ್ರಮುಖ ಉತ್ಪಾದನಾ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ, ಮಹೀಂದ್ರ & ಮಹೀಂದ್ರ, ಟಾಟಾ ಮೋಟಾರ್ಸ್ ಹಾಗೂ ಹೋಂಡಾ ಕಂಪನಿಗಳು ಭಾನುವಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಆಗಸ್ಟ್ ತಿಂಗಳಲ್ಲಿ ಈ ಎಲ್ಲ ಕಂಪನಿಗಳ ಮಾರಾಟ ಎರಡಂಕಿ ಕುಸಿತ ಕಂಡಿರುವುದು ಉತ್ಪಾದನಾ ವಲಯವನ್ನು ಕಂಗೆಡಿಸಿದೆ.
ಜಿಡಿಪಿ ಏರಿಳಿದರೆ ನಮ್ಮ ನಿತ್ಯ ಜೀವನದ ಮೇಲೆ ಏನಾಗುತ್ತದೆ.. ನೈಜ ಅಭಿವೃದ್ಧಿಯ ಸೂಚಕವೇನು?
ಕೆಲ ದಿನಗಳ ಹಿಂದೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ತನ್ನ 3000 ಗುತ್ತಿಗೆ ನೌಕರರನ್ನು ಹುದ್ದೆಯಿಂದ ಕಿತ್ತು ಹಾಕಿತ್ತು. ಇದರ ಜೊತೆಗೆ ಉಳಿದ ಕಾರು ಉತ್ಪಾದನಾ ಸಂಸ್ಥೆಗಳ ನೌಕರರ ಉದ್ಯೋಗದ ಮೇಲೂ ಅತಂತ್ರ ಸ್ಥಿತಿ ತಲೆದೋರಿದೆ.
ದೇಶೀಯ ಮಾರುಕಟ್ಟೆಯಲ್ಲಿ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಹೋಂಡಾ ಕಾರ್ಸ್ ಇಂಡಿಯಾ(ಎಚ್‌ಸಿಐಎಲ್) ಸಂಸ್ಥೆಯ 8291 ಕಾರುಗಳು ಮಾತ್ರವೇ ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 17,020 ಕಾರುಗಳು ಮಾರಾಟವಾಗಿದ್ದವು.
ಇನ್ನು ಮಹಿಂದ್ರಾ ಹಾಗೂ ಮಹಿಂದ್ರಾ ಕಂಪನಿಯ ವಾಹನಗಳ ಮಾರಾಟ ಸಂಖ್ಯೆ ಶೇ. 25, ಹುಂಡೈ ಕಂಪನಿಯ ವಾಹನ ಮಾರಾಟ ಶೇ. 9.54, ಟಾಟಾ ಕಿರ್ಲೋಸ್ಕರ್ ವಾಹನಗಳ ಮಾರಾಟದಲ್ಲಿ ಶೇ. 21, ಹೊಂಡಾ ಕಾರ್ಸ್ ಮಾರಾಟದಲ್ಲಿ ಶೇ. 51ರಷ್ಟು, ಟಾಟಾ ಮೋಟಾರ್ಸ್ ವಾಹನಗಳ ಮಾರಾಟದಲ್ಲಿ ಶೇ. 58ರಷ್ಟು ಇಳಿಕೆಯಾಗಿದೆ.
ಆಗಸ್ಟ್ ತಿಂಗಳಲ್ಲಿ ಶೇಕಡಾವಾರು ಇಳಿಕೆ
- ಹೊಂಡಾ ಕಾರ್ಸ್- ಶೇ. 51
- ಮಾರುತಿ ಸುಜುಕಿ - ಶೇ. 33
- ಟಾಟಾ ಮೋಟಾರ್ಸ್ - ಶೇ. 58
- ಟೊಯೊಟ ಕಿರ್ಲೋಸ್ಕರ್ ಮೋಟಾರ್ - ಶೇ. 21