ಶ್ರೀನಗರ: ಕೊರೊನಾದಿಂದ ದೇಶವ್ಯಾಪಿ ವಿಧಿಸಿರುವ ಲಾಕ್ಡೌನ್, ದೇಶ ಆರ್ಥಿಕತೆಯನ್ನ ನಿಶ್ಚಲಗೊಳಿಸಿದೆ. ವಿಶೇಷ ಸ್ಥಾನ ಮಾನದಿಂದ ಹೊರಬಂದ ಕಣಿವೆ ರಾಜ್ಯ ಕಾಶ್ಮೀರದ ಆರ್ಥಿಕತೆಯು ಈಗಾಗಲೇ ದುರ್ಬಲ ಹಂತಕ್ಕೆ ಬಂದು ತಲುಪಿದೆ. 'ಲಾಕ್ಡೌನ್ನಿಂದು ಕಾಶ್ಮೀರದ ವಿತ್ತೀಯ ವಹಿವಾಟು ಇನ್ನಷ್ಟು ಕುಸಿಯಬಹುದು' ಎಂದು ಕಾಶ್ಮೀರದ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷರು ಎಚ್ಚರಿಸಿದ್ದಾರೆ.
ಕಾಶ್ಮೀರ ಹೆಚ್ಚಾಗಿ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಮಾರ್ಚ್ 24ರಂದು ಲಾಕ್ಡೌನ್ ಹೇರಿದ್ದರಿಂದ ಸಂಪೂರ್ಣ ನಿಂತುಹೋಗಿದೆ. ಹೌಸ್ ಬೋಟ್ಗಳ ಹೆಸರುವಾಸಿ ಹಾಗೂ ಪ್ರವಾಸಿಗರ ಆಕರ್ಷಣೆಯ ದಾಲ್ ಸರೋವರದಲ್ಲಿ ದೋಣಿಗಳ ಓಡಾಟ ಸ್ತಬ್ಧವಾಗಿವೆ. ಬಹುತೇಕ ಬೋಟ್ ನಾವಿಕರು ಮೀನುಗಾರಿಕೆಯ ಮೂಲಕ ತಮ್ಮ ಸಮಯ ದೂಡುತ್ತಿದ್ದಾರೆ.
ಕಳೆದ ವರ್ಷ (2019) ಡಿಸೆಂಬರ್ನಲ್ಲಿ ಇಂಡಸ್ಟ್ರಿ ಚೇಂಬರ್ ಪ್ರಕಟಿಸಿದ ವರದಿಯಲ್ಲಿ, ಕಾಶ್ಮೀರಿ ಆರ್ಥಿಕತೆ ಕುಸಿಯಲು ಮುಖ್ಯವಾಗಿ ಸಂವಹನ ಮತ್ತು ಇಂಟರ್ನೆಟ್ ಸ್ಥಗಿತ ಹಾಗೂ ಭಾರಿ ಪ್ರಮಾಣದಲ್ಲಿ ಮಿಲಿಟರಿ ಪಡೆಗಳ ನಿಯೋಜನೆ ಎಂದು ಆಪಾದಿಸಿತ್ತು.
ಹೆಚ್ಚು- ಹೆಚ್ಚು ತೊಂದರೆಗಳು ಎದುರಾಗುತ್ತಿರುವುದರಿಂದ ನಾವು ಹೆಚ್ಚು ಚಿಂತೆಗೆ ಈಡಾಗಿದ್ದೇವೆ. ಪ್ರವಾಸೋದ್ಯಮ ಇಲ್ಲದೇ ರಫ್ತೂ ಇಲ್ಲದೇ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಿಮಗೆ ಬೇಕಾದ ಸರಿಯಾದ ಉದ್ಯೋಗ ಕಡಿತ ಅಂಕಿಸಂಖ್ಯೆ ಕೊಡಲು ಆಗಲ್ಲ. ಎಷ್ಟು ಜನ ಕೆಲಸ ಕಳೆದುಕೊಂಡಿದ್ದಾರೋ, ಎಷ್ಟು ಜನ ಉದ್ಯೋಗದಲ್ಲಿ ಇದ್ದಾರೋ ನಿಮಗೆ ಗೊತ್ತು. ಇಡೀ ಜನಸಂಖ್ಯೆ ಸುಮ್ಮನೆ ಕುಳಿತಿದೆ. ಭಾರತದ ಉಳಿದ ಭಾಗದ ನಮ್ಮ ಸಹೋದರರು ಮತ್ತು ಸಹೋದ್ಯೋಗಿಗಳಿಗಿಂತ ನಮ್ಮ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ ಎಂದು ಇಂಡಸ್ಟ್ರಿ ಅಧ್ಯಕ್ಷ ಶೇಖ್ ಅಶಿಖ್ ಹೇಳಿದ್ದಾರೆ.
ನಾವು ದೊಡ್ಡ ಬಿಕ್ಕಟ್ಟು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕೋವಿಡ್ 19 ಸೋಂಕಿನಿಂದ ನಾವು ಲಾಕ್ಡೌನ್ ಎದುರಿಸುತ್ತಿಲ್ಲ. ದಶಕಗಳಿಂದ ಲಾಕ್ಡೌನ್ ಸಮಸ್ಯೆಗಳಿಗೆ ಸಿಲುಕಿದ್ದೇವೆ ಎಂದರು.