ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗವು ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ದೀರ್ಘವಾದ ಕರಿ ನೆರಳು ಆವರಿಸಿತ್ತು ಎಂಬುದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ನಿಂದ ತಿಳಿದು ಬರುತ್ತದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ 2020-21ರ ಒಟ್ಟು ಕರ್ನಾಟಕ ರಾಜ್ಯದ ದೇಶೀಯ ಉತ್ಪನ್ನ (ಜಿಎಸ್‌ಡಿಪಿ) ಶೇ 2.6ರಷ್ಟು ಕುಗ್ಗುತ್ತದೆ ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು 2021-22ರ ರಾಜ್ಯ ಬಜೆಟ್ ತಯಾರಿಕೆಯನ್ನು ಅತ್ಯಂಕ ಕಷ್ಟಕರ ಆಯವ್ಯಯ ತಯಾರಿಕೆ ಎಂದು ಕರೆದರು. ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಆದಾಯ ಕೊರತೆಯ ಬಜೆಟ್ ಅನ್ನು ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಿದರು.
ಕರ್ನಾಟಕ ರಾಜ್ಯ ಬಜೆಟ್ ಯಾವಾಗಲೂ ಆದಾಯದ ಹೆಚ್ಚುವರಿ ಮೊತ್ತ ಹೊಂದಿರುತ್ತಿತ್ತು. 2021-22ರ ಆದಾಯ ಕೊರತೆಯ ಪ್ರಮಾಣ 15,134 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಬಿಎಸ್ವೈ ಮಂಡಿಸಿದ ಆಯವ್ಯಯದ ಗಾತ್ರ 2,46,207 ಕೋಟಿ ರೂ.ಯಷ್ಟಿದೆ. ಒಟ್ಟು ಸ್ವೀಕೃತಿ 2,43,734 ಕೋಟಿ ರೂ., ಸಾರ್ವಜನಿಕ ಸಾಲ 71,332 ಕೋಟಿ ರೂ. ಹಾಗೂ ಬಂಡವಾಳ ಸ್ವೀಕೃತಿ 71,463 ಕೋಟಿ ರೂ.ಯಷ್ಟಿದೆ. 2,46,565 ಕೋಟಿ ರೂ. ಒಟ್ಟು ವೆಚ್ಚವಿದ್ದು, ರಾಜಸ್ವ ವೆಚ್ಚ 1,87,405 ಕೋಟಿ ರೂ., ಬಂಡವಾಳ ವೆಚ್ಚ 44,237 ಕೋಟಿ ರೂ. ಹಾಗೂ ಸಾಲ ಮರುಪಾವತಿ 14,565 ಕೋಟಿ ರೂ.ಯಷ್ಟಿದೆ.
ರಾಜ್ಯ ಸರ್ಕಾರದ ಆದಾಯದ ಮೂಲಗಳು
ಒಂದು ರೂಪಾಯಿಯಲ್ಲಿ ಕೇಂದ್ರದ ಸಹಾಯದನ ಶೇ 6ರಷ್ಟು, ಸಾರ್ವಜನಿಕ ಲೆಕ್ಕ (ನಿವ್ವಳ) ಶೇ 2ರಷ್ಟು, ರಾಜ್ಯ ತೆರಿಗೆ ಶೇ 50ರಷ್ಟು, ಕೇಂದ್ರ ತೆರಿಗೆ ಪಾಲು ಶೇ 10ರಷ್ಟು ಹಾಗೂ ಸಾಲದ ಪ್ರಮಾಣ ಶೇ 29ರಷ್ಟರಿಂದ ಖಜಾನೆಗೆ ಜಮೆಯಾಗುತ್ತದೆ.
ಯಾವುದಕ್ಕೆ ಎಷ್ಟು ಖರ್ಚು ಮಾಡುತ್ತೆ?
ಸಹಾಯಾನುದಾನ ಮತ್ತು ಇತರೆ ಶೇ 4ರಷ್ಟು, ಆಡಳಿತಾತ್ಮಕ ವೆಚ್ಚಗಳು ಶೇ 1ರಷ್ಟು, ವೇತನ ಮತ್ತು ಭತ್ಯೆಗಳು ಶೇ 21ರಷ್ಟು, ಪಿಂಚಣಿ ಶೇ 10ರಷ್ಟು, ಋಣ ಮೇಲುಸ್ತುವಾರಿ ಶೇ 18ರಷ್ಟು, ಸಹಾಯದನ ಶೇ 10ರಷ್ಟು, ಬಂಡವಾಳ ವೆಚ್ಚ ಶೇ 17ರಷ್ಟು ಹಾಗೂ ಇತರೆ ರಾಜಸ್ವ ವೆಚ್ಚ ಶೇ 16ರಷ್ಟು ಒಂದು ರೂಪಾಯಿಯಲ್ಲಿ ಶೇಕಡವಾರು ಖರ್ಚಾಗುತ್ತದೆ.