ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಯ ಮೂರನೇ ಬಜೆಟ್ ಮಂಡಿಸಲು ಸಿದ್ಧತೆ ನಡೆಸ್ತಿದೆ. ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ವಿತ್ತ ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರು ತಮ್ಮ 3ನೇ ಮುಂಗಡಪತ್ರ ಸೋಮವಾರ ಮಂಡಿಸಲಿದ್ದಾರೆ.
ಕೊರೊನಾದಿಂದ ಆರ್ಥಿಕ ಮುಗ್ಗಟ್ಟು, ಜಿಎಸ್ಟಿ ಆದಾಯ ಕುಸಿತ, ಉತ್ಪಾದನೆ ಕ್ಷೀಣ, ಉಪಭೋಗದ ಬೇಡಿಕೆ ಕ್ಷೀಣ, ನಿರುದ್ಯೋಗ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಕಚ್ಛಾತೈಲಗಳ ಬೆಲೆ ಏರಿಕೆ ಸೇರಿ ಅನೇಕ ಸಮಸ್ಯೆಗಳ ನಡುವೆ ಸಿಲುಕಿರುವ ದೇಶದ ಆರ್ಥಿಕತೆಯ ದೃಷ್ಟಿಕೊನದಿಂದ ಫೆ.1ರಂದು ಮಂಡನೆಯಾಗುವ 2021-22ರ ಬಜೆಟ್ ಮಹತ್ವದಾಗಿದೆ. ಈ ವೇಳೆ ಕರ್ನಾಟಕ ಏನೆಲ್ಲ ನಿರೀಕ್ಷಿಸುತ್ತಿದೆ ಎಂಬುದರ ಲೆಕ್ಕಾಚಾರ ಇಲ್ಲಿದೆ.
ಪ್ರಸಕ್ತ ವರ್ಷ ರಾಜ್ಯದ ಹಂಚಿಕೆಯನ್ನು ಕೆಳ ಮಟ್ಟಕ್ಕೆ ಪರಿಷ್ಕರಿಸಬಾರದು ಎಂದು ಕೇಂದ್ರವನ್ನು ಒತ್ತಾಯಿಸಿದ ಕರ್ನಾಟಕ, ಕೇಂದ್ರ ಹಣಕಾಸು ಪ್ರಾಯೋಜಿತ ಯೋಜನೆಗಳಿಗೆ (ಸಿಎಸ್ಎಸ್) ಅನುದಾನವನ್ನು ಗಣನೀಯವಾಗಿ ಹೆಚ್ಚಿಸುವಂತೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದೆ.
15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಘೋಷಿಸಿದ 5,495 ಕೋಟಿ ರೂ. ವಿಶೇಷ ಅನುದಾನ ಸೇರಿದಂತೆ ಬಾಕಿ ಇರುವ ಎಲ್ಲಾ ಬಾಕಿಗಳನ್ನು ತೆರವುಗೊಳಿಸಲು ಕೇಂದ್ರಕ್ಕೆ ತಾಕೀತು ಮಾಡಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ಹೆಚ್ಚುವರಿ ಅನುದಾನು ಕೊಡುವಂತೆ ಕೋರಿದೆ.
ಹೊಸ ಸಿಎಸ್ಎಸ್ ಯೋಜನೆ ಪರಿಚಯಿಸುವಾಗ ರಾಜ್ಯದ ಅಭಿಪ್ರಾಯವನ್ನು ಕೇಂದ್ರ ಪರಿಗಣಿಸಬೇಕು. ಇಲ್ಲದಿದ್ದರೇ ರಾಜ್ಯ ಹಣಕಾಸಿನ ಮೇಲೆ ಹೊರೆ ಉಂಟಾಗಲಿದೆ. ಬಜೆಟ್‌ನಲ್ಲಿ ರೂಪಿಸಲಾದ ಯೋಜನಾ ವಿನಿಯೋಗದ ಪ್ರಕಾರ ಕೇಂದ್ರ ಸರ್ಕಾರವು ಸಿಎಸ್ಎಸ್ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಬೇಕಾಗಿದೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದರು. ಯೋಜನೆ ವಿನಿಯೋಗಕ್ಕಿಂತ ಕಡಿಮೆ ಹಣ ಬಿಡುಗಡೆ ಮಾಡುವುದರಿಂದ ರಾಜ್ಯದ ಮೇಲೆ ಹೆಚ್ಚುವರಿ ಹೊರೆ ಉಂಟಾಗುತ್ತದೆ. ಹೀಗಾಗಿ, ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇರಿಸಿದೆ.
ಇದನ್ನೂ ಓದಿ: ಹೊಸ ಕೃಷಿ ಕಾಯ್ದೆಗಳು ರೈತ ಮಾರುಕಟ್ಟೆ ಸ್ವಾತಂತ್ರ್ಯದ ಹೊಸ ಯುಗಕ್ಕೆ ಕರೆದೊಯ್ಯಲಿವೆ: ಆರ್ಥಿಕ ಸಮೀಕ್ಷೆ
ಮೆಟ್ರೋ ರೈಲು, ಉಪ ನಗರ ರೈಲು ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಹಣದ ಕೊರತೆ ಕಾಡುತ್ತಿದೆ. ಘನತ್ಯಾಜ್ಯ ನಿರ್ವಹಣೆ ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಹೆಚ್ಚಿನ ಹಣ ವಿನಿಯೋಗಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ-3 ಮತ್ತು ಎತ್ತಿನಹೊಳೆಯಂತಹ ದೊಡ್ಡ ನೀರಾವರಿ ಯೋಜನೆಗೂ ಬಹು ನಿರೀಕ್ಷೆ ಇರಿಸಿದೆ.
15ನೇ ಹಣಕಾಸು ಆಯೋಗದ ಶಿಫಾರಸುಗಳ ಅಡಿಯಲ್ಲಿ ನೀಡಲಾಗುವ ವಿಶೇಷ ಅನುದಾನದ ಹೊರತಾಗಿ, ಮುಂಬರುವ ಬಜೆಟ್‌ನಲ್ಲಿ ಇಲ್ಲಿಯವರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖರೀದಿ ಮಾಡಿದಕ್ಕೆ 885 ಕೋಟಿ ರೂ. ಬಿಡುಗಡೆ ಮಾಡಲು ಕೇಂದ್ರವನ್ನು ಕೋರಿದೆ.
2020ರ ಆಗಸ್ಟ್ ತಿಂಗಳಲ್ಲಿ ಉಂಟಾದ ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳನ್ನು ‘ಪ್ರವಾಹಪೀಡಿತ ತಾಲೂಕುಗಳು’ ರಾಜ್ಯ ಸರ್ಕಾರ ಘೋಷಿಸಿತ್ತು. ಕರ್ನಾಟಕ ಸರ್ಕಾರ ಸಲ್ಲಿಸಿದ 2,261 ಕೋಟಿ ರೂ. ಬೇಡಿಕೆಗೆ ಪ್ರತಿಯಾಗಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿಯಲ್ಲಿ 1,369 ಕೋಟಿ ರೂ. ಬಿಡುಗೆ ಮಾಡಲಾಗಿದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ವಾಣಿಜ್ಯ, ಪ್ರವಾಸ, ಹೋಟೆಲ್, ಸಂವಹನ ಸೇರಿದಂತೆ ಇತರೆ ಕೆಲವು ತೆರಿಗೆ ರಿಯಾಯಿತಿಗಳು ನೀಡುವಂತೆ ಕೋರಿದೆ. ಇದರಿಂದ ಉದ್ಯಮಿಗಳು ಚೇತರಿಸಿಕೊಳ್ಳಬಹುದೆಂದು ನಿರೀಕ್ಷಿಸಬಹುದು. ಭಾರತದೊಳಗಿನ ಪ್ರಯಾಣದ ಮೇಲಿನ ಆದಾಯ ತೆರಿಗೆ ವಿನಾಯಿತಿಗೆ ಉದ್ಯಮಿಗಳು ಮನವಿ ಮಾಡಿವೆ.