ಟೊಕಿಯೋ(ಜಪಾನ್): ಕೋವಿಡ್-19 ವೈರಾಣುವಿನ ಕರಿಛಾಯೆ ವಿಶ್ವದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಇದರಿಂದ ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಂಪತ್ತು ಕರಗಿದೆ. ಈ ನಡುವೆ ಉದ್ಯಮಿಗಳಿಗೆ ನೆರವಾಗಲು ಜಪಾನ್ ಪ್ರಧಾನಿ ಶಿಂಜೊ ಅಬೆ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ಕೊರೊನಾ ವೈರಸ್ ಏಕಾಏಕಿ ಉಂಟಾಗುವ ಆರ್ಥಿಕ ತೊಂದರೆಗಳನ್ನು ನಿಭಾಯಿಸಲು ಎರಡನೇ ತುರ್ತು ಪ್ಯಾಕೇಜ್ ನೀಡಲಾಗುವುದು. ಇದರಲ್ಲಿ ಸಣ್ಣ ಉದ್ಯಮಗಳಿಗೆ ಸಹಾಯ ನಿಧಿಯ 15 ಬಿಲಿಯನ್ ಡಾಲರ್ ಸಾಲ ನೀಡಿಕೆಯ ಯೋಜನೆ ಸೇರಿದೆ ಎಂದು ಶಿಂಜೊ ಅಬೆ ಹೇಳಿದ್ದಾರೆ.
ದೇಶಾದ್ಯಂತ 500ಕ್ಕೂ ಹೆಚ್ಚು ಜನರಿಗೆ ಕೋವಿಡ್- 19 ಸೋಂಕು ತಗುಲಿದೆ. ಸೋಂಕಿನ ತೀವ್ರತೆಯಿಂದ ಈಗಾಗಲೇ 9 ಮಂದಿ ಬಲಿಯಾಗಿದ್ದು, ಇದಕ್ಕೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಉದ್ಯಮಿಗಳ ಮೇಲೆ ಉಂಟಾಗುತ್ತಿರುವ ಪರಿಣಾಮವನ್ನು ತಗ್ಗಿಸಿ ಉದ್ದಿಮೆಗಳಿಗೆ ಸಹಾಯ ಮಾಡಲು ಸಾಲದ ಪ್ಯಾಕೇಜ್ ಘೋಷಿಸಿದೆ.
ಕಳೆದ ತಿಂಗಳು ಮೊದಲ ಹಂತದ ಭಾಗವಾಗಿ 500 ಬಿಲಿಯನ್ ಯೆನ್ ಮೊತ್ತದ ಪ್ಯಾಕೇಜ್ ನೀಡಿತ್ತು. ಸಣ್ಣ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು 1.6 ಟ್ರಿಲಿಯನ್ ಯೆನ್ (15 ಬಿಲಿಯನ್ ಡಾಲರ್) ಮತ್ತೊಂದು ಪ್ಯಾಕೇಜ್ ಪ್ರಕಟಿಸಿದೆ.
ನಾವು 1.6 ಟ್ರಿಲಿಯನ್ ಯೆನ್ ಮೌಲ್ಯದ ಪ್ರಬಲ ಬಂಡವಾಳ ಸಹಾಯವನ್ನು ನೀಡುತ್ತಿದ್ದೇವೆ. ಅದು ಯಾವುದೇ ಬಡ್ಡಿ ಇಲ್ಲದೆ ಸಾಲಗಳನ್ನು ಪರಿಣಾಮಕಾರಿಯಾಗಿ ನೀಡುವ ಯೋಜನೆ ಒಳಗೊಂಡಿದೆ. ಇದರಿಂದಾಗಿ ಜಪಾನ್‌ನಾದ್ಯಂತದ ಸಣ್ಣ ಉದ್ಯಮಗಳು ಬಹಳ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲಿವೆ ಎಂದು ಅಬೆ ಸರ್ಕಾರ ಸ್ಪಷ್ಟನೆ ನೀಡಿದೆ.