ನವದೆಹಲಿ: ನಿರೀಕ್ಷೆಯಂತೆ ಭಾರತದ ಆರ್ಥಿಕತೆಯು ಕೊರೊನಾ ಹಾಗೂ ಲಾಕ್‌ಡೌನ್ ಪರಿಣಾಮದಿಂದ ಸುಮಾರು 40 ವರ್ಷಗಳಲ್ಲೇ ಮೊದಲ ಬಾರಿಗೆ ಸಂಕುಚಿತಗೊಂಡಿದೆ.
ಕೇಂದ್ರೀಯ ಸಾಂಖ್ಯಿಕ ಸಂಸ್ಥೆ (ಸಿಎಸ್‌ಒ) ಸೋಮವಾರ ಒಟ್ಟು ದೇಶಿಯ ಉತ್ಪನ್ನ ಅಥವಾ ಜಿಡಿಪಿಗೆ ಸಂಬಂಧಿಸಿದ ದತ್ತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಆರ್ಥಿಕತೆಯು 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ 23.9ರಷ್ಟು ಕುಗ್ಗಿದೆ. ಇದು ಭಾಗಶಃ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಪರಿಣಾಮವಾಗಿ ಕೋವಿಡ್ -19 ಸಾಂಕ್ರಾಮಿಕದಿಂದ ಪ್ರಚೋದಿಸಲ್ಪಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.
ಭಾರತೀಯ ಆರ್ಥಿಕತೆಯು 1979ರ ಬರಗಾಲದ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರವು ಸಾರ್ವಕಾಲಿಕ ಕನಿಷ್ಠ ಶೇ -5.2ರಷ್ಟಕ್ಕೆ ತಲುಪಿತ್ತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾರ್ಚ್ 24ರಂದು 21 ದಿನಗಳ ಸಂಪೂರ್ಣ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿತ್ತು. ಇದನ್ನು ಮೇ ಕೊನೆಯವರೆಗೆ ಮೂರು ಹಂತಗಳಲ್ಲಿ ವಿಸ್ತರಿಸಿತ್ತು.