ನವದೆಹಲಿ: ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಬೆಳವಣಿಗೆಯು ಜುಲೈನಲ್ಲಿ ಶೇ 4.3 ಕ್ಕೆ ಇಳಿದಿದ್ದು, ಉತ್ಪಾದನಾ ವಲಯದ ಕಳಪೆ ಪ್ರದರ್ಶನವೇ ಕುಸಿತಕ್ಕೆ ಮುಖ್ಯ ಕಾರಣವೆಂದು ಗುರುವಾರ ಬಿಡುಗಡೆಯಾದ ಸರ್ಕಾರದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಉತ್ಪಾದನೆ ಪ್ರಮಾಣ ಮಾಪನದ ಐಐಪಿ ಪ್ರಕಾರ, 2018ರ ಜುಲೈನಲ್ಲಿ ಬೆಳವಣಿಗೆ ದರವು ಶೇ 6.5ರಷ್ಟಿತ್ತು. ತಯಾರಿಕೆ ವಲಯದಲ್ಲಿ ಮಂದಗತಿ ಮಾರಾಟ ಬೆಳವಣಿಗೆ ಕಂಡು ಬರುತ್ತಿರುವುದರಿಂದ 2019ರ ಜುಲೈನಲ್ಲಿ ಶೇ 4.2ಕ್ಕೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 7ರಷ್ಟು ಬೆಳವಣಿಗೆ ಹೊಂದಿತ್ತು.
ಜುಲೈ ತಿಂಗಳ ವಿದ್ಯುತ್ ವಲಯದ ಬೆಳವಣಿಗೆಯು ಶೇ 4.8ಕ್ಕೆ ತಲುಪಿದ್ದರೆ. ಕಳೆದ ವರ್ಷ ಈ ಅವಧಿಯಲ್ಲಿ ಶೇ 6.6ರಷ್ಟು ಇತ್ತು. ಗಣಿಗಾರಿಕೆಯಲ್ಲಿ ಚೇತರಿಕೆ ಕಂಡುಬಂದಿದ್ದು, ಶೇ 4.9ರಷ್ಟಿದೆ. 2018ರ ಜುಲೈನಲ್ಲಿ ಇದು ಶೇ 3.4ರಷ್ಟಿತ್ತು ಎಂದು ತಿಳಿಸಿದೆ.
ಕೈಗಾರಿಕಾ ಉತ್ಪಾದನಾ ಸೂಚ್ಯಂಕದ ಅಂಕಿಅಂಶಗಳು ಹೊರ ಬಿದ್ದ ಬೆನ್ನಲ್ಲೇ ಚಿಲ್ಲರೆ ಮಾರುಕಟ್ಟೆಯ ಹಣದುಬ್ಬರದ ದತ್ತಾಂಶ ಸಹ ಬಹಿರಂಗವಾಗಿದೆ. ಮಂದಗತಿಯ ಆರ್ಥಿಕತೆಯಿಂದ ಆಟೋಮೊಬೈಲ್ ಉದ್ಯಮ ಈಗಾಗಲೇ ಉದ್ಯೋಗ ನಷ್ಟಕ್ಕೆ ಒಳಗಾಗಿದ್ದು, ಇನ್ನಷ್ಟು ಉದ್ಯೋಗಗಳು ಕಳೆದುಕೊಳ್ಳಬಹುದೆಂಬ ಕಳವಳವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.