ನವದೆಹಲಿ: ದೇಶದ ನಗರ ಪ್ರದೇಶಗಳಲ್ಲಿ 2018ರ ಏಪ್ರಿಲ್- ಜೂನ್ ನಡುವೆ ಇದ್ದ ಶೇ 9.8ರಷ್ಟು ನಿರುದ್ಯೋಗದ ಪ್ರಮಾಣದಲ್ಲಿ ತುಸು ಇಳಿಕೆಯಾಗಿ, 2019ರ ಜನವರಿ- ಮಾರ್ಚ್ ಅವಧಿಯಲ್ಲಿ ಶೇ 9.3ಕ್ಕೆ ಬಂದು ತಲುಪಿದೆ ಎಂದು ಸರ್ಕಾರದ ದತ್ತಾಂಶಗಳು ತಿಳಿಸಿವೆ.
ಆದರೆ, ಈ ಡೇಟಾದಲ್ಲಿ 2018ರ ಜನವರಿ-ಮಾರ್ಚ್ ಹಿಂದಿನ ಅವಧಿಗೆ ಹೋಲಿಸಬಹುದಾದ ಅಂಕಿ ಅಂಶಗಳನ್ನು ಪ್ರಸ್ತುತ ಪಡಿಸಿಲ್ಲ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ತನ್ನ ತ್ರೈಮಾಸಿಕ ಬುಲೆಟಿನ್ 2019ರ ಜನವರಿ- ಮಾರ್ಚ್ ಅವಧಿಯದ್ದು ಮಾತ್ರ ಬಿಡುಗಡೆ ಮಾಡಿದೆ.
ನಗರ ಪ್ರದೇಶಗಳ ಕಾರ್ಮಿಕರ ಬಲವನ್ನು ಮಾತ್ರ ಬಿಡುಗಡೆ ಆಗಿದ್ದು, ಇದರಲ್ಲಿ ಗ್ರಾಮೀಣ ಭಾಗದ ಅಂಕಿಅಂಶಗಳಿಲ್ಲ. 2018ರ ಏಪ್ರಿಲ್-ಜೂನ್ ಅವಧಿಯಲ್ಲಿನ ಶೇ 9ಕ್ಕೆ ಹೋಲಿಸಿದರೆ, ನಗರ ಪ್ರದೇಶಗಳಲ್ಲಿನ ಪುರುಷರ ನಿರುದ್ಯೋಗ ದರವು 2019ರ ಮಾರ್ಚ್ ತಿಂಗಳಲ್ಲಿ ಶೇ 8.7ರಷ್ಟಿದೆ. 2018ರ ಇದೇ ಅವಧಿಯಲ್ಲಿ ಮಹಿಳಾ ನಿರುದ್ಯೋಗದ ಪ್ರಮಾಣ ಶೇ 12.8ರಷ್ಟು ಇತ್ತು. ವರದಿ ಮಾಡಿರುವ ಅವಧಿಯಲ್ಲಿ ಅದು ಶೇ 11.6ಕ್ಕೆ ಬಂದು ತಲುಪಿದೆ.
ಮಂದಗತಿಯ ಆರ್ಥಿಕತೆಯಿಂದ ಕೇಂದ್ರ ಸರ್ಕಾರ ಸಾಕಷ್ಟು ಟೀಕೆಗೆ ಒಳಗಾಗಿತ್ತು. ನಿಧಾನಗತಿಯ ಆರ್ಥಿಕ ಚಟುವಟಿಕೆಯಿಂದ ನಿರುದ್ಯೋಗದ ಪ್ರಮಾಣ ಹೆಚ್ಚಾಗುತ್ತಿದೆ. 2017-18ರಲ್ಲಿ ಒಟ್ಟು ಕಾರ್ಮಿಕರ ಬಲವು ಕುಸಿದು 45 ವರ್ಷಗಳ ಹಿಂದಿನ ಮಟ್ಟಕ್ಕೆ ತಲುಪಿದೆ ಎಂಬ ದತ್ತಾಂಶಗಳ ವರದಿ ಪ್ರಕಟವಾಗಿದ್ದವು. ಈ ಬಳಿಕ ನಗರ ಪ್ರದೇಶದಲ್ಲಿ ನಿರುದ್ಯೋಗ ಕುಸಿದಿದೆ ಎಂಬ ಅಂಕಿಅಂಶಗಳು ಕೇಂದ್ರಕ್ಕೆ ಅಲ್ಪ ನೆಮ್ಮದಿ ನೀಡಿದಂತಾಗಿದೆ.