ನವದೆಹಲಿ: 2019ರ ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 4.7 ರಷ್ಟಿದೆ ಎಂದು ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿ- ಅಂಶಗಳಿಂದ ತಿಳಿದು ಬಂದಿದೆ.
ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯು 2018-19ರ ಇದೇ ತ್ರೈಮಾಸಿಕದಲ್ಲಿ ಶೇ 5.6ಕ್ಕೆ ದಾಖಲಿಸಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.
2013ರ ಜನವರಿ- ಮಾರ್ಚ್ ಅವಧಿಯಲ್ಲಿ ಜಿಡಿಪಿ ವೃದ್ಧಿ ಶೇ 4.3ರಷ್ಟು ಇತ್ತು. 2018ರ ಜುಲೈ- ಸೆಪ್ಟೆಂಬರ್ನಲ್ಲಿ ಶೇ 7ರಷ್ಟಿದ್ದ ಆರ್ಥಿಕ ಬೆಳವಣಿಗೆ ದರ 2019ರಲ್ಲಿ ಕುಸಿದಿದೆ. ದೇಶದ ಆರ್ಥಿಕತೆಯು 2019-20ನೇ ಹಣಕಾಸು ವರ್ಷದಲ್ಲಿ ಶೇ 5ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಎನ್‌ಎಸ್‌ಒ ಹೇಳಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸಹ 2019-20ರಲ್ಲಿ ಜಿಡಿಪಿ ವೃದ್ಧಿಯ ದರ ಶೇ 5ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಚೀನಾ ಆರ್ಥಿಕತೆ ಸಹ 2019ರ ಅಕ್ಟೋಬರ್-ಡಿಸೆಂಬರ್ ಶೇ 6ರಷ್ಟು ಇದ್ದು, ಇದು 27 ವರ್ಷಗಳಲ್ಲಿ ಕನಿಷ್ಠ ದರವಾಗಿದೆ. 2019ರ ಕ್ಯಾಲೆಂಡರ್ ವರ್ಷದಲ್ಲಿ ಚೀನಾದ ಆರ್ಥಿಕ ಬೆಳವಣಿಗೆಯು ಶೇ 6.1ರಷ್ಟಿದೆ. ಇದು ಮೂರು ದಶಕದಲ್ಲಿ ಅತ್ಯಂತ ಕನಿಷ್ಠ ವೃದ್ಧಿ ದರವಾಗಿದೆ.
ವರ್ಲ್ಡ್ ಪಾಪುಲೇಷನ್ ರಿವ್ಯೂ ವರದಿಯ ಅನ್ವಯ ಭಾರತದ ಜಿಡಿಪಿ ಲೆಕ್ಕದಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ರಾಷ್ಟ್ರಗಳನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಿದೆ ಎಂದಿತ್ತು. 208.74 ಲಕ್ಷ ಕೋಟಿ ರೂ. ಜಿಡಿಪಿ ಹೊಂದಿರುವ ಭಾರತ, ಇಂಗ್ಲೆಂಡ್ (200 ಲಕ್ಷ ಕೋಟಿ ರೂ.) ಹಾಗೂ ಫ್ರಾನ್ಸ್ (192 ಲಕ್ಷ ಕೋಟಿ ರೂ.) ಆರ್ಥಿಕತೆಗಳಿಗಿಂತ ಮುಂದಿದೆ.